•  ತ್ಯಾಂಪನ ರಾಮಾಯಣ "  1





      • ಕಾರು ತುಂಬಾ ಹಸಿರಾದ ವಾತಾವರಣದಲ್ಲಿ ಹೊಕ್ಕ ಹಾಗಿತ್ತು, ವಿಶಾಲವಾದ ಜಾಗ ಆವರಣದಲ್ಲಿ ಕಾರು ನಿಂತಿತು. ಕಾರಿನಿಂದ ಕೆಳಗಿಳಿಯುತ್ತಲೇ ದೂರದಲ್ಲಿ ದೊಡ್ಡದಾಗಿ ಬರೆದ " ನಿಮಾನ್ಸ್ ಮಾನಸ ಚಿಕಿತ್ಸಾಲಯ" ಕಂಡಿತು.
        ಪಕ್ಕಕ್ಕೆ, ತಿರುಗಿದೆ ದೊಡ್ಡ ದೊಡ್ಡ ಸರಳುಗಳ ಮುಚ್ಚಿದ ಬಾಗಿಲಿನ ಹಿಂದೆ ಒಬ್ಬನನ್ನು ಹಿಡಿದು ಎಳೆಯುತ್ತಿದ್ದರು ಇಬ್ಬರು, "ನಾನು ಹುಚ್ಚ ಅಲ್ಲ ನಾನು ಹುಚ್ಚ ಅಲ್ಲ " ಎನ್ನುವ ಮಾತು ಆ ರೋಗಿಯ ಬಾಯಿಂದ.
        ಯಾಕೋ ಸ್ವರ ಕೇಳಿದ ಹಾಗೆಯೇ ಇತ್ತು. ಸ್ವಲ್ಪ ಈ ಕಡೆ ತಿರುಗಿದ ಮುಖ ನೋಡಿ ಬೆಚ್ಚಿದೆ!!! ತ್ಯಾಂಪ....ಅವನಿಗೇನಾಯ್ತು... ? ಆತನೂ ಈ ಕಡೆ ತಿರುಗಿ...  ಸೀನಾ ನಾನು ಹುಚ್ಚ ಅಲ್ಲ ಕಣೋ ಇವರು ಸುಮ್ಮನೇ ಕರೆತಂದಿದ್ದಾರೆ ನನ್ನ ಬಾರೋ ಇಲ್ಲಿಂದ ಬಿಡಿಸೋ ಅನ್ನುತ್ತಿದ್ದ.....
        ಥಟ್ಟನೆ ಎಚ್ಚರಾಯ್ತು..
        ಹೌದು ಇದು ಕನಸೇ...
        ಪಕ್ಕದಲ್ಲೇ ದೂರವಾಣಿಯ ಸದ್ದು.. ಅದೇ ಸ್ವರ " ಹಿಲ್ಲೋ...?"   ಸೀನನದ್ದು
        "ಏನಾಯ್ತೋ..?"
        "ತ್ಯಾಂಪನ್ನ  ಕಂಡಿದ್ಯಾ..?"
        "ಇಲ್ಲೆ ಯಾಕೆ...?"
        "ಹುಶಾರಿಲ್ಲೆ ಅಂಬ್ರ..."
        "ಎಂತ ಆಯ್ತಾ..?"
        "ನೀ ಹೋಯ್ ಕಾಣ ಅಕ್ಕಾ... ನಾನ್ ಕಡಿಗ್ ಬತ್ತೆ."
        ಏನು ಮಾಡಲೂ ಗೊತ್ತಾಗದೇ ಅವನ  ಮನೆಗೆ ಫೋನಾಯ್ಸಿದೆ. ಯಾರೋ ಎತ್ತಿದರು. "ಯಾರು ಮಾತಾಡೋದು?...ತ್ಯಾಂಪ....?"
        ತ್ಯಾಂಪಾ... ಏನಾಯ್ತೋ ಹುಷಾರಿಲ್ಲ ಅಂಬ್ರಲ್ಲ ಏನಾಯ್ತು..?
        ಯಾರು ತ್ಯಾಂಪ..?  ಇಲ್ಲಿಯಾರೂ ತ್ಯಾಂಪ ಇಲ್ಲಲ್ಲ..
        ಮತ್ತೆ ನೀವು ಯಾರು..? ನಾನು ಮಂಗ್ಯಾ...

        ನಂಬರ್ ಪುನಹ ತಾಳೆ ನೋಡಿದೆ ಅದೇ ಇದೆ ಮತ್ತೆ ಸ್ವರ ಅವನದ್ದೇ ಆದರೆ ಯಾಕೆ ಮಂಗ್ಯಾ ಅಂದ...
        ಅಂದರೆ ಕೇಸು ಸೀರಿಯಸ್ಸೇ... ಅಲ್ಲಿಗೇ ಹೋಗ ಬೇಕಾಗಿದೆ

        ಅವನ ಚಿಕ್ಕಂದಿನ ಕಥೆಯಿದು. ಅವನಿಗೊಂದು ಅಭ್ಯಾಸ ಇತ್ತು. ಬೆಳಿಗ್ಗೆ ಎದ್ದ  ಕೂಡಲೇ ಮೊದಲು ಆತ ಯಾರನ್ನ ನೋಡುತ್ತಾನೋ , ಯಾರೇ ಸಿಗಲಿ, ಅವರ  ಹತ್ತಿರ ಇವ ನಾನು ಯಾರು? ಅಂತ ಕೇಳುವ. ಉತ್ತರಕ್ಕೆ ಅವರು ಏನೇ ಹೇಳಲಿ ಆ ದಿನವಿಡೀ ಮನೆಯಲ್ಲಿ ಎಲ್ಲರೂ ಅದೇ ಹೆಸರು ಹಿಡಿದೇ ಕರೆಯ ಬೇಕು. ಬೇರೆ ಯಾವ ಹೆಸರೂ ಕರೆಯ ಕೂಡದು. ಯಾರೋ ಬೆಳಿಗ್ಗೆಮಕ್ಕಳು ತಮಾಷೆಗೆ "ನಿನ್ನ ಹೆಸರು ನಾಯಿ" ಅಂದಿದ್ದರು. ಎಲ್ಲರೂ ಅವನನ್ನು ಆ ದಿನವಿಡೀ ನಾಯಿ ಅಂತಲೇ ಕರೆಯ ಬೇಕಲ್ಲ. ಅವನಿಗೇನೂ ಬೇಸರವಿಲ್ಲ, ಬೇಸರವೆಂದರೆ ಹಾಗೆ ಕರೆಯದಿದ್ದರೆ ಮಾತ್ರ. ಕೆಲವೊಮ್ಮೆ ಇದು ವಿಪರಿತಕ್ಕೆ ಹೋಗಿ ಬೆಳಿಗ್ಗೆ ಅವನಿಗೆ ಏನಂತ ಹೆಸರು ಹೇಳಿದ್ದರೋ ಅದು ಮರೆತು ಹೋಗಿ, ಆ ಹೆಸರು ಕರೆಯದಿದ್ದುದ್ದಕ್ಕಾಗಿ ಇಡೀ ದಿನ  ಆತ  ಅಳುತ್ತಿದ್ದೂ ಉಂಟು.

        ಮನೆಯಲ್ಲಿ ಆತನೇ ಇದಿರ್ಗೊಂಡ . ಏನಾಯ್ತಪ್ಪಾ ತ್ಯಾಂಪ ಎಂದರೆ ತ್ಯಾಂಪ ಯಾರು? ನಾನು ಮಂಗ್ಯಾ ಅಂದ
        ಸರಿ ಬಿಡು ಮಂಗ್ಯಾ..ನಿನ್ನ ಪತ್ನಿ ಎಲ್ಲಿ"  ಕೇಳಿದೆ
        ಅಷ್ಟರಲ್ಲಿ ಅವನ ಹೆಂಡತಿ..

        "ಇಲ್ಲಣ್ಣಾ ಅವರು ಬೇರೆಯೇ ಆಗಿದ್ದಾರೆ, ಈಗ ಯಾವಾಗಲೂ ಮಂಕಾಗಿ ಕುಳ್ತಿರ್ತಾರೆ, ಏನಾಯ್ತು ಅಂತ ಕೇಳಿದರೆ ಹೇಳೋಲ್ಲ"
        "ಒಂದುಉಪಾಯ ಮಾಡು ಮಾವಿನಕಾಯಿ ತಂಬುಳಿ ಮತ್ತಿ ಹುರುಳಿ ಚಟ್ನಿ ಬೆಳ್ಳುಲ್ಲಿ ಹಾಕಿ ಊಟ ಮಾಡಿಸು, ಸರಿ ಹೋಗ್ತಾನೆ ಬಿಡು."
        "ಪ್ರಯೋಜನ ಇಲ್ಲೆ,  ಮೊನ್ನೆ ಏನಾಯ್ತು ಗೊತ್ತಾ? ಇವರು ಹೊರಗಡೆ ಹೋಗಿದ್ದರು!!!"
        "ಯಾಕೆ ಮನೆಯಲ್ಲಿ ಪಾಯಿಖಾನೆ ಇತ್ತಲ್ಲಾ..?"
        "ಅಲ್ಲಣ್ಣಾ...... ಹಾಗೇ ಅಡ್ಡಾಡಲು ಹೋಗಿದ್ದರು. ಮನೆಗೆ ಬರುವಾಗ ಮರೆತು ಹೋಗಿ ದಾರಿ ತಪ್ಪಿ ತು ಪಕ್ಕದ ಮನೆಯವರಿಗೆ ಅಂತ  ಕೊಟ್ಟ ಕಾಗದ ಅವರ ಕೈಯಲ್ಲೇ ಇತ್ತು, ಅದರಲ್ಲಿದ್ದ ವಿಳಾಸ  ಯಾರ್ಯಾರ ಹತ್ರಾನೋ ಕೇಳ್ಕಂಡು ಬಂದು ಪಕ್ಕದ ಮನೇನೇ ತಮ್ ಮನೆ ಅಂತ ತಿಳ್ಕೋಂಡು ಮಧ್ಯಾಹ್ನದ ವರೆಗೆ ಅಲ್ಲಿಯೇ ಆರಾಮ್ ಆಗಿ ಇದ್ದರು,ಸಂಜೆ ಮನೆ ಹೆಂಗ್ಸಿಗೇ ಏನಮ್ಮ ಬೆಳಗಿಂದ ಇಲ್ಲೇ ಇದ್ದೀಯಲ್ಲ ನಿಮ್ ಗಂಡ ನೋಡಿದ್ರೆ ಏನ್ ಅಂದ್ಕೊಳ್ಳೊಲ್ಲ ಅಂತ ಕೇಳೋದೇ..ಅಷ್ಟೇ ಆದ್ರೆ ಚಿಂತೆ ಇಲ್ಲಾ"
        "ಹೇಳಿ ಹೇಳಿ"
        "ಮೊನ್ನೆ  ನಮ್ಮ ಮಗನ್ನ   ಪಕ್ಕದಮನೆ ಹುಡುಗ  ಅಂತ ಮಾತಾಡ್ಸಿದ್ರು, ಕೆಲವು ಸಾರಿ ನನ್ನನ್ನೇ ಯಾರು ಅಂತ ಕೇಳೋರು. . ಕಳೆದ ಹದಿನೈದ್ ದಿನದಿಂದ ಕಲ್ಲೂರಾಮ್ ರವರ ಆಫೀಸಿಗೆ ಇವ್ರ ಹೋಗಿಯೇ ಇಲ್ಲವಂತೆ , ಮನೆಯಿಂದ ದಿನಾ ಬೆಳಿಗ್ಗೆ ಹೊರಟು ಸಂಜೆ ಬರ್ತಾ ಇದ್ರು , ಎಲ್ಲಿಗೆಲ್ಲ ಹೋಗಿ ಎನೇನ್ ಮಾಡಿ ಬಂದ್ರೋ  ಗೊತ್ತಿಲ್ಲ. ಈಗ ತಲೆಗೊಬ್ರ ಮಾತಾಡೋರು"
        "ಯಾಕೆ ಡಾಕ್ಟ್ರ ಹತ್ರ ಹೋಗ್ಲಿಲ್ಲವಾ?"
        "ಅದೇ ದೊಡ್ಡ ಕಥಿ, ನನ್ನ  ಅಕ್ಕ ಡಾಕ್ಟ್ರ ಬೇಡ, ಗುರುಗಳಹತ್ರ ಹೋಗೋಣ ಅಂತ ಹೇಳಿ ಯಾವ್ದೋ ಗುರುಗಳ ಹೋಗಿ ಅವ್ರ ಹೇಳಿದ್ದ ಕೇಳ್ಕಂಡ್ ಬಂದ್ವಿ"
        "ಸರಿ ಆಮೇಲೆ..?"
        "ಆಮೇಲೆಂತ...?  ನವಗೃಹರಿಗೆ ೯ ಸುತ್ತು, ಅಶ್ವತ್ಥನಿಗೆ ೭ ಸುತ್ತು ಅಂತ ಅಲ್ಲೆಲ್ಲ ಹೋಗಿ ತಿರುಗಿ ತಿರುಗಿ ಯಾರ್ಯಾರಿಗೋ ಡ್ಯಾಷ್ ಹೊಡ್ದ ಚಪ್ಪಲಿ ಸೇವೆ ಮಾಡ್ಕಂಡ್ ಬಂದದ್ದಾಯ್ತ್.
        "ಅಯ್ಯೋ ಪಾಪ"
        "ಅನುಭವಿಸ್ದೋರಿಗೇ ಗೊತ್ತು ಸಂಕಟ ,ಮೊನ್ನೆ ಇದೆಲ್ಲ ಬ್ಯಾಡ ಅಂತೇಳಿ ಯಾವ್ದೋ ಗಲ್ಲಿ ಡಾಕ್ಟ್ರ ಹತ್ರ ಹೋಯ್ತ್ ,ಅವ್ರ್ ೧೦-೧೫ ಬೇರೆ ಬೇರೆ ಮಾತ್ರೆ ಕೊಟ್ಟಿದ್ರ.  ಮೊನ್ನೆ ನಾನಿಲ್ಲೆ ಅಂತೇಳಿ ಯ್ವ್ಯಾವ್ದೋ ಮಾತ್ರೆ ಎಲ್ಲ ಒಟ್ಟಿಗೇ ತಿಂದರು. ಅದ್ಕೇ ಈಗ  ಬೆಳಿಗ್ಗೆ ಎದ್ದ  ಕೂಡ್ಲೇ ನಾನ್ ಯಾರ?ನನ್ನ ಹೆಸರು ಎಂತ..? ಅಂತ ಕೇಳೋದು, ಎಂತ ಹೆಸರ್ ಕೇಳ್ತ್ರೋ ,ಅದೇ ಹೆಸ್ರ ದಿನಾ ಇಡೀ ಕರೆಯ ಬೇಕು
        ಪಕ್ಕದ್ಮನೆ ಖಿಲಾಡಿ ಮಕ್ಕಳು ಎಂತೆಂತದ್ದೋ ಹೆಸ್ರ್ ಹೇಳಿ ಅದನ್ನ ಕರೆಯಕಾಗ್ದೇ ನಮ್ಗೆ ಪಜೀತಿ. ನನ್ನ ಖರ್ಮ

        "ಮೊನ್ನೆ ಆ ಗುರುಗಳು ಬಂದ್, ಡಾಕ್ಟ್ರ ಕೊಟ್ಟ ಆ ಮಾತ್ರೆ ತಿನ್ನಿಸ ಬೇಡಿ,  ಅಂದ್ರ ಅವನು ಹಾಗೇ ಸರಿಯಾಗ್ತಾನೆ ಅಂದ್ರು'

        "ನಿನ್ನೆ ನನ್ನ ಅಪ್ಪ ಇವರನ್ನು ನಿಮ್ಹಾನ್ಸ್ ಗೆ ತೋರಿಸಿ ಅಂದರು, ನೀವೇ ಹೇಳಿ ಅಣ್ಣಾ..? ನಾನು ಯಾರ ಮಾತು ಕೇಳೋದು? "


        ನಿಮ್ಹಾನ್ಸ್ ಗಾ" ಎಂದೆ ಗಾಬರಿಯಿಂದ.




    ತ್ಯಾಂಪನ ರಾಮಾಯಣ "  2



    ಹೌದು..ನಿಮ್ಹಾನ್ಸ್ ಗೆ"

    "ಯಾಕೆಂದರೆ ಅಲ್ಲಿನ ನರತಜ್ಞರು ಇವನನ್ನು ಸರಿಯಾಗಿ ಪರೀಕ್ಷಿಸಿ ಚಿಕಿತ್ಸೆ ಕೊಡಿಸುತ್ತಾರೆ ಅಂತ ಇರಬಹುದು".
    "ಅದೆಲ್ಲ ಸರಿ ನಿಜವಾಗಿ ಇದು ಹೇಗೆ ಶುರುವಾಯ್ತು..? ಯಾಕೆ ತ್ಯಾಂಪ ಹೀಗಾದ ಹೇಳಿ ನನಗೆ... ಮೊದಲಿಂದ."   ನಾನೆಂದೆ.
    ತ್ಯಾಂಪನ ಹೆಂಡತಿ ಅರ್ಥಾತ್ ತ್ಯಾಂಪಿ ಇದಕ್ಕೆ ಕಾರಣವಾದಘಟನೆಯನ್ನು ವಿವರಿಸಿದ್ದು  ಹೀಗೆ
    ." ಆ ದಿನ  ಅಂದರೆ ರವಿವಾರ ೧.೦೮.೧೦ ರಂದು. . ನಮಗೆ ಮಂತ್ರಿ ಮಾಲ್ ನಲ್ಲಿ ಸ್ವಲ್ಪ ಕೆಲಸವಿತ್ತು.ನಾನೂ ಅವರೂ ಹೊರಗಡೆ ಹೋಗಿದ್ದವು
    ಹಿಂದಿನ ದಿನ ಸಂಪದದಲ್ಲಿ ಬಂದ ದುಬೈ ಮಂಜಣ್ಣನ " ನೆನಪಿನಾಳದಿಂದ...೧೧, ೧೨ " ಲೇಖನ ( http://sampada.net/b...), ಓದಿ ಭಾರೀ ಖುಷಿಯಲ್ಲಿದ್ದರು, ತಾವೇ ಮಂಜಣ್ಣನಾದ ಹಾಗೆ ಅವರ ಫೈಟಿಂಗ್ ಶೈಲಿ ನನಗೆ ಮತ್ತೆ ಮತ್ತೆ ವಿವರಿಸುತ್ತಿದ್ದರು. ಅದು ಅವರು ತನ್ನ ಅಕ್ಕನ ಮರಣದ  ದುಃಖಾತಿರೇಕದಿಂದ ಆಗಿದ್ದೆಂದರೂ ಅವರು ಕೇಳಲಿಲ್ಲ. ಅಂತ ಅಲ್ಲಿಗೆ ಹೋದೆವು. ಅಲ್ಲಿ ಮೊದಲಿಂದ್ಲೂ ಅವರಿಗೆ ಆ "ಎತ್ತಣೆ " ನೋಡಿದರೆ ಹೆದರಿಕೆ. ಅದರಲ್ಲಿ ಎಂದೂ ಹೋಗೋದೇ ಇಲ್ಲ. ಆ ದಿನ ಪಕ್ಕದ ಮನೆಯ ಮಕ್ಕಳೂ ಜತೆಗಿದ್ದವು.ಅದರಲ್ಲೇ  ಹೋಗೋಣ ಅಂತ ಅವುಗಳ ಒತ್ತಾಯ ಬೇರೆ.ಸರಿ ಅವರನ್ನೂ ಮಕ್ಕಳನ್ನೂ ಒಂದು ಕಡೆ ಬಿಟ್ಟು ನಾನು ಸ್ವಲ್ಪ ಹೊತ್ತು ಬೇರೆ ಕಡೆ ಹೋದೆ ಅಷ್ಟೇ, ಈಗ ಯಾಕೆ ಹೋದೆ ಅನ್ನಿಸಿತು.
    ಒಂದು ಕೈಯ್ಯಲ್ಲಿ ಬಕೇಟು ಹಿಡಿದು ಇನ್ನೇನು ಬೇಕೋ ಬೇಡವೋ ಅಂತ ಇನ್ನೇನು ಮೊದಲ ಹೆಜ್ಜೆ ಮೆಟ್ಟಲಿನ ಮೇಲೆ ಇಡಬೇಕು, ಪಕ್ಕದಲ್ಲೇ ಒಂದು ಹೆಂಗಸಿಗೂ ಗಂಡಸಿಗೂ ಜಗಳ( ಪ್ರಾಯಷಃ ಅವಳ ಗಂಡನೇ ಇರಬೇಕು) ಆಗುವುದನ್ನು ನೋಡಿದರು, ಇದನ್ನು ಬಿಟ್ಟು ಅವರ ಜಗಳ ಬಿಡಿಸಲು ಹೊರಟರು. ತಾನೇ ದುಬಾಯಿ ಮಂಜಣ್ಣ ಅಂದ್ಕೊಂಡು ಅದೇ ಶೈಲಿಯಲ್ಲಿ ಹೊರಟರು. ಆದರೆ  ಅದದ್ದೇ ಬೇರೆ. ಆತ ಇವರನ್ನೇ ತಪ್ಪು ತಿಳಕೊಂಡು , ಇವರ ಮೇಲೆ ಏರಿಬಂದ ಮೊದಲ ಪೆಟ್ಟು ಅವನೇ ತಿಂದ ಜೋರಾಗಿಯೇ, ಆದರೆ ನಂತರದ್ದು ಮಾತ್ರ ಇವರ ಬಾರಿ, ಉಪ್ಪಿನಲ್ಲಿ ಹಾಕಿದ ಮಾವಿನ ಕಾಯಿಯಾಯ್ತು ಇವರ ಗತಿ,
    ಅದೂ ಅಲ್ಲದೇ ನಂತರ  ಇವರು "ಎತ್ತಣೆ" ( ಎಲಿವೇಟರ್) ಮೇಲೆ ಯಾವ ಧ್ಯಾನದಲ್ಲಿ ನಿಂತರೋ, ಅದರ ಮೇಲೆ ಒಂದು ಕಾಲು ಮಾತ್ರ ಇತ್ತು, ಅನಂತರ ಏನಾಯ್ತೊ ಗೊತ್ತಿಲ್ಲ, ಕಾಲು ಮೇಲೆ ತಲೆ ಕೆಳಗೆ ಆಗಿ , ಬಕೇಟು ನೆಲಕ್ಕೆ ತಾಗಿದ ಶಬ್ದ   ಜೋರಾಗಿಯೇ ಇತ್ತು( ಜತೆಯಲ್ಲಿ ಇವರೂ ಇದ್ದರಲ್ಲ),  ಪಕ್ಕದಲ್ಲೇ ನಿಂತಿದ್ದ ಗೂರ್ಖಾ "ಎತ್ತಣೆ" ( ಎಲಿವೇಟರ್).... ಯನ್ನು ನಿಲ್ಲಿಸದಿದ್ದರೆ  ಗೊತ್ತಿಲ್ಲ ಏನಾಗುತ್ತಿತ್ತೋ. ಅಂತು ಹಿಡಿದು ಎತ್ತಿದೆವು ಆಗೇನೋ ಸರಿಯಿದ್ದರು ಅನ್ನಿಸಿತ್ತು .
    ಸ್ವಲ್ಪ ಕಾಲ ಅವರನ್ನು ಅಲ್ಲಿಯೇ ಪಕ್ಕದ ಮನೆಯಮಕ್ಕಳ ಜತೆ ಬಿಟ್ಟು ನಾನು ನನ್ನ ಪರ್ಚೇಸಿಂಗ್  ಗೆ ಸ್ವಲ್ಪ ಕಾಲ ಬೇರೆ ಫ್ಲೋರ್ ಗೆ ಹೋಗಿದ್ದೆ. ವಾಪಾಸ್ಸು ಬಂದು ನೋಡಿದರೆ ... ಪೂರ್ತಿ ಬದಲಾಗಿದ್ದಾರೆ ಅನ್ನಿಸಿತು.್
    "ಸ್ವಲ್ಪ ಕಾಲ ಎಂದರೆ  ನಾನು ಕೇಳಿದೆ...?"
    "ಬರೇ ನನ್ನ ಎರಡು ಐಟಮ್ ಖರೀಧಿಸಿದೆ ಅಷ್ಟೇ"
    "ಅಂದರೆ ಸುಮಾರು ಎರಡು ಮೂರು ಗಂಟೆಗಳಾಗಿದ್ದಿರಬಹುದು ಅಷ್ಟೇ"
    "ಅಷ್ಟೇ"
    ಸರಿ ನೀವು ಬಂದು ನೋಡಿದಾಗ ಏನಾಗಿತ್ತು..?
    "ನಾನು ಬಂದು ನೋಡುವಾಗ ಪ್ರಳಯವೇ ಬಂದಂತಾಗಿತ್ತು"
    "ಯಾಕೆ..?"
    "ನನ್ನವರನ್ನು ಮಂತ್ರಿ ಮಾಲ್ ನ ಗೇಟ್ ನ ಹೊರಗಡೆ ಕಳುಹಿಸಿದ್ದರು, ಅಲ್ಲಿಯೇ ಪುನಹ ಒಳಕ್ಕೆ ಬರ ಬಾರದ ಹಾಗೆ ಪಕ್ಕದಲ್ಲೇ ಸೆಕ್ಯುರಿಟಿ ಕೂಡಾ ಕಾಯುತ್ತಿದ್ದರು."
    "ಸರಿ ಆಮೇಲೆ..?"
    "ಅವರ ಕೈಯ್ಯಲ್ಲೊಂದು ಪತ್ರವಿತ್ತು."
    "ಪತ್ರವಾ ? ಯಾವ  ಪತ್ರ..?"
    "ನನಗೂ ಅವರಿಗೂ ಮುಂದಿನ ೬ ತಿಂಗಳು ಮಾಲ್ ನೊಳಕ್ಕೆ ಪ್ರವೇಶ ನಿಷೇಧ  ಹೇರಿದ್ದ ಪತ್ರವದು." 

    ತ್ಯಾಂಪನ ಹೆಂಡತಿ ಕೊಟ್ಟ ಪತ್ರ ಓದಿದೆ ಒಕ್ಕಣೆ ಸರಿ ಸುಮಾರು ಹೀಗಿತ್ತು
    ಮಿ ತ್ಯಾಂಪ ಹಾಗೂ ಅವರ ಧರ್ಮ ಪತ್ನಿಗೆ ಮುಂದಿನ ಆರು ತಿಂಗಳ ಕಾಲ ಮಂತ್ರಿ ಮಾಲ್ ನೊಳಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಕಾರಣ ಹೀಗಿ
    ೧.  ಹೆಂಗಸರ ಬಾಸ್ಕೇಟಿನಲ್ಲಿ ರೇಝರ್ ಗಳನ್ನೂ ಗಂಡಸರ ಬಾಸ್ಕೇಟಿನಲ್ಲಿ ಹೆಂಗಸರ ಒಳ ಉಡುಪುಗಳನ್ನೂ ಅವರ ವಸ್ತುಗಳ ಜತೆ ಸೇರಿಸಿ ಕೋಲಾಹಲವನ್ನುಂಟು ಮಾಡಿದ್ದಾರೆ.
    ೨.  ಕೆಲವು ಗ್ರಾಹಕರ ಕಾಲ ಕೆಳಗಿನಿಂದ ಟೋಮೇಟೋ ಸಾಸ್ ಉದ್ದಕ್ಕೂ ಚೆಲ್ಲಿ ಅವರಲ್ಲಿ ಹಾಗೂ ನಮ್ಮ ಸ್ಟಾಫ್ ನವರಲ್ಲಿ ಆತಂಕ ಸೃಷ್ಟಿಸಿದ್ದಾರೆ.
    ೩.  ಡ್ರೆಸ್ಸಿಂಗ್ ರೂಮ್ ನಲ್ಲಿ ಕೆಲಕಾಲವಿದ್ದು ಅಲ್ಲಿಂದ "ಹೇಯ್ ಇಲ್ಲಿ ಟೊಯ್ಲೆಟ್ ಪೇಪರ್ ಇಟ್ಟಿಲ್ಲ " ಅಂತ ಗಲಾಟೆ ಮಾಡಿದ್ದಾರೆ.  
    ೪.  ಮಕ್ಕಳ ಆಟಿಕೆಯ ವಿಭಾಗದಲ್ಲಿ ಎಲ್ಲಾ ಹಲವಾರು ಆಟಿಕೆಗಳ ಸ್ವಿಚ್ಚುಗಳನ್ನು ಅದುಮಿ ಅಲ್ಲಿಗೆ ಬಂದ ಮಕ್ಕಳನ್ನೂ ದೊಡ್ದವರನ್ನೂ ಕಂಗಾಲು ಮಾಡಿಸಿದ್ದಾರೆ
    ೫.  ಹೆಂಗಸರು ಮಕ್ಕಳ ಮೇಲೆ ಎಲ್ಲೆಂಲ್ಲಿಂದಲೋ ಹಾವು ಜಿರಲೆ ಹಲ್ಲಿ( ಕೃತಿಮ) ಬೀಳಿಸಿ ಹಂಗಾಮಾ ಮಾಡಿದ್ದಾರೆ.
    ೬.  ಹೆಂಗಸರು ಗಂಡಸರು ಎಂತ ಚೇಂಜ್ ರೂಮಿನ ಹೊಸ ಬೋರ್ಡಗಳನ್ನು ಬದಲಿಸಿ ಹಲವರನ್ನು  ಬೆಚ್ಚಿ ಬೀಳಿಸಿದ್ದಾರೆ.
    ೭.  ಮಕ್ಕಳ ವಿಭಾಗದ ಎಲ್ಲಾ ಮಕ್ಕಳಿಗೂ ಒಂದೊಂದು ಐಸ್ ಕ್ರೀಂ ಉಚಿತ ಎಂದು ಧ್ವನಿವರ್ಧಕದಲ್ಲಿ ಮಕ್ಕಳ ದನಿಯಲ್ಲಿ ಹೇಳಿಸಿ  ಕೊಡದೇ ಇದ್ದಾಗ ಅವರೆಲ್ಲಾ ಅಳುವಂತೆ ಮಾಡಿ ಸತ್ಯಾ ನಾಶ್ ಮಾಡಿದ್ದಾರೆ
    ೮.  ಪ್ರಿಂಟರ್ ಪೇಪರಗಳನ್ನು ಟೋಯ್ಲೆಟ್ ಪೇಪರ್ಗಳನ್ನೂ ಬದಲಿಸಿ ನಮ್ಮ ಸ್ಟಾಫ್ ಗಳನ್ನು ಬೇಸ್ತು ಬೀಳಿಸಿದ್ದಾರೆ.
    ೯.  ಮಾಲ್ ನೊಳಗಿನ  ಎಲ್ಲಾ ಗ್ರಾಹಕರ ಬಾಸ್ಕೇಟಿನಲ್ಲಿ ಮಿ ತ್ಯಾಂಪನವರು ಒಂದೊಂದು ಕಂಡೋಮ್ ಪ್ಯಾಕೇಟನ್ನು ಅವರಿಗೆ ಗೊತ್ತಿಲ್ಲದ  ಹಾಗೆ ಹಾಕಿ ಅವರಲ್ಲಿ ಗಲಿಬಿಲಿ ಮೂಡಿಸಿರುತ್ತಾರೆ
    ೧೦.  ಇಷ್ಟೂ ಸಾಲದೆಂಬಂತೆ ನಿಂತ ಫ್ಯಾನುಗಳನ್ನು ಒಮ್ಮೆಲೇ ಚಾಲೂ ಮಾಡಿಸಿ ಹಲವರ  ವಿಗ್ ಗಳನ್ನು ಉದುರಿಸಿ ಅವರ ಮಂಡೆ ಬೋಳು ಮಾಡಿ ಎಲ್ಲರೂ ನಗುವಂತೆ ಮಾಡಿದ್ದಾರೆ.
    ಈ ಎಲ್ಲಾ ಮೇಲಿನ ಕಾರಣಗಳಿಂದ ನಮ್ಮ ಎಲ್ಲಾ ಗ್ರಾಹಕರ ಸುಖ ಹಾಗೂ ಸಂತೋಷಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಎಲ್ಲಾ ಬ್ರಾಂಡ್ ಮಾಲುಗಳಲ್ಲಿ ತಮ್ಮ  ಹಾಗೂ ತಮ್ಮವರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ದಯವಿಟ್ಟು ಸಹಕರಿಸ ತಕ್ಕದ್ದು.

    ನನಗೆ ಸಂಶಯಬಂತು ಈ ಮೇಲಿನವುಗಳು ತ್ಯಾಂಪನ ಕೆಲಸವಾಗಿರಲು ಸಾಧ್ಯವೇ ಇಲ್ಲ, ತ್ಯಾಂಪ ಇನ್ನೊಬ್ಬರನ್ನು ಹಳ್ಳಕೆ ಬೀಳಿಸಿ ತಾನು ಎಂದೂ ನಗಲಾರ, ಬೇಕಾದರೆ ತಾನೇ ಬಿದ್ದು ನಕ್ಕಾನು...

    ********          ***********      ************

    ಸೀನ ಬಸ್ಸಿನಿಂದಿಳಿದು ಅಟೋರಿಕ್ಷಾ ದತ್ತ ನಡೆದ.
    ಬರ್ತೀಯೇನಪ್ಪಾ..
    ಸರಿ ಎಲ್ಲಿಗೆ ಸಾರ್
    ಹೇಳಿದ
    ಆಟೋ ಹೊರಟಿತು.
    ಅದು ಹೋಗುವ ರಭಸ ಸೀನನಿಗೆ ಸಂಶಯಕ್ಕಿಟ್ಟುಕೊಂಡಿತು.
    ಬೆಳಗಿನ ಹೊತ್ತು, ಅಲ್ಲೊಂದು ಇಲ್ಲೋಂದು ವಾಹನ ಮಾತ್ರ ರಸ್ತೆಯಲ್ಲಿ ಓಡಾಡುತ್ತಿವೆ, ಆದರೂ ಈತ ಒಂಬತ್ತೂವರೆ ಹತ್ತು ಗಂಟೆಯ ರಸ್ತೆಯಲ್ಲಿದ್ದಹಾಗೆ ಓಡಿಸುತ್ತಿದ್ದಾನೆ, ಅದೂ ಅರ್ಧ ಕಣ್ಣು ಮುಚ್ಚಿ, ನಿದ್ದೆಯಲ್ಲಿದ್ದಾನಾ ಹೇಗೆ ಅಂತ ಸೀನನಿಗೆ ಸಂಶಯವೂ ಬಂತು. ಹೀಗೇ ಇದ್ದರೆ ತನ್ನ ಅಸ್ತಿತ್ವಕ್ಕೆ ಸಂಚಕಾರ ವೆಂದರಿತ ಸೀನ ಮಿಣ್ಣಕ್ಕೆ ಅದರಿಂದ ಇಳಿದು ಸ್ವಲ್ಪ ಹೊತ್ತು ನಿಂತ. ಅದೃಷ್ಟಕ್ಕೆ ಸ್ವಲ್ಪ ದೂರದಲ್ಲಿ ಇನ್ನೊಂದು ಅಟೋ ಬರುವುದು ಕಂಡಿತು.ಅದರಲ್ಲಿ ಕುಳಿತು ಮೊದಲಿನದ್ದನ್ನು ಹಿಂಬಾಲಿಸಲು ಹೇಳಿದ. ಮುಂದಿನ ವ್ರತ್ತದಲ್ಲಿ ಮೊದಲಿನ ಆಟೋದವ ಹಿಂದಕ್ಕೆ ನೋಡಿ ಗಾಬರಿಯಿಂದ ತನ್ನ ಆಟೋದಿಂದ ಇಳಿದು  ಅರ್ಧ ಆಶ್ಚರ್ಯ, ಅರ್ಧ ಹೆದರಿಕೆಯಿಂದ ಅದರ ಸುತ್ತ ತಿರುಗುತ್ತ ಇದ್ದು ಬಿಟ್ಟ.

    ಸರಿಯಪ್ಪ ಇನ್ನು ಮುಂದೆ ಸೀದಾ ಹೋಗಿ ಬಲಗಡೆ ತಿರುಗು ಎಂದ ಸೀನ.






    ತ್ಯಾಂಪನ ರಾಮಾಯಣ 3








    ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್  1


    ಗಣೇಶರ ರಾಗಿ ಮುದ್ದೆ ಚಾಲೇಂಜನ್ನು ಹೇಗೆ ಸ್ವೀಕರಿಸಬೇಕೆನ್ನುವುದರ ಬಗ್ಗೆ ಯೋಚಿಸುತ್ತಿದ್ದಾಗ ಹಿಲ್ಲೋ ಎಂಬ ಶಬ್ದ ನನ್ನ ಪಕ್ಕದಲ್ಲೇ ಇದ್ದ ಕರವಾಣಿಯಿಂದ. ಇಡೀ ಪ್ರಪಂಚದಲ್ಲೇ ಹಲ್ಲೋ ಅನ್ನ  ಹಿಲ್ಲೋ ಅಂತ ಕರೆಯುವವರಾರ್ಯಾದರೂ ಇದ್ದಾರೆಂದರೆ ಅದು ಈ ಶೀನ ಮಾತ್ರ, ಹಂಸಾ ನಂದಿಯವರ ಪುಸ್ತಕ ಬಿಡುಗಡೆಗೆ ಬಂದವ ಊರಿಗೆ ಹೊರಡಲೇ ಇಲ್ಲ ಹಾಗಾದರೆ?
    . ಏನಪ್ಪಾ...?
    ವಿಷಯ ಗೊತ್ತಾಯ್ತಾ...?
    ಇಲ್ಲ ಹೇಳು..?
    ತ್ಯಾಂಪನನ್ನ ಪೋಲೀಸರು ಕೊಂಡೊಯ್ದರಂತೆ..!!!
    ಯಾಕೆ ಏನಾಯ್ತು..?
    ಅಂತಹ ಕೆಲಸ ಏನೂ ಮಾಡಲ್ಲವಲ್ಲ ಆತ, ಏನೋ ಒಂತರಾ ಫಿರ್ಕಿ ಅಷ್ಟೇ, ಆದರೆ ಯಾರಿಗೂ ತೊಂದರೆ ಕೊಡೋ ಪ್ರಾಣಿ ಅಲ್ಲ ಆತ.
    ಏನೋ ಅವನ ಹೆಂಡತಿಯೇ ಕಂಪ್ಲೈಂಟ್ ಕೊಟ್ಟಳಂತೆ..
    ತ್ಯಾಂಪಿಯಾ..? ತ್ಯಾಂಪನ ಬಗ್ಗೆ ಏನಂತ ಕಂಪ್ಲೈಂಟ್ ಕೊಟ್ಟಾಳು..?
    ಬರ್ತೀನಿ ಇರು ಎಲ್ಲಿಗೆ ಬರಬೇಕು ಹೇಳು.. ವಿಳಾಸ ಬರೆದುಕೊಂಡೆ.
    ಹೊರಟೆ.

    ಆದಿನ ಅವನ ಬ್ಯಾಡ್ ಲಕ್ಕೇ ಖರಾಬ್ ಆಗಿತ್ತಂತೆ ( ತ್ಯಾಂಪನೇ ಹೇಳಿದ್ದಂತೆ)
    ಬೆಳಿಗ್ಗೆ ಕಾಫಿ ತಿಂಡಿ ಏನೂ ಇಲ್ಲ ಆದಿನ, ಬೆಳಿಗ್ಗೇನೇ ಹಾಲ್ನಲ್ಲೇ ಕಣ್ಣು ಕೆಂಪು ಮಾಡಿಕೊಂಡು ಮುಖ ಊದಿಸಿಕೊಂಡು ಕುಳಿತಿದ್ದಳು ತ್ಯಾಂಪಿ.
    ಏನಯ್ತಮ್ಮಾ...? ಪ್ಯಾರ್ನಲ್ಲಿ ತ್ಯಾಂಪ ಕರೆಯೋದು ಹಾಗೇನೇ.
    ಉತ್ತರವಿಲ್ಲ.. ಮುಖದೊಡನೆ ದೇಹವೂ ಇನ್ನೊಂದ್ಕಡೆ ತಿರುಗಿತ್ತು..?
    ಒಸಾಮಾ ಪಕ್ಕದಲ್ಲೇ ಇತ್ತು ಇದೇ ಏನಾದರೂ ಕಿತಾಪತಿ ಮಾಡಿರಬಹುದಾ,..? ಏನೋ ಸೀರಿಯಸ್ಸ್ ಕೇಸೇ.
    "ಕಲ್ಪನಾ ಯಾರು ಹೇಳಿ, ಅಂಕಲ್.." ಒಸಾಮಾ
    ಸಿನೇಮಾ ತಾರೆ ಬೆಳ್ಳಿ ಮೋಡದೋಳು,ಬೆಳ್ಳಗೆ ಅಂದವಾಗಿದ್ದಾಳೆ, ಸ್ವಲ್ಪ ಕುತ್ತಿಗೆ ಉದ್ದ ಆದರೆ ಒಳ್ಳೆಯ ನಟನೆ ಮಾಡ್ತಾಳೆ"
    ನೋಡು ನೋಡು ಎಲ್ಲ ವಿಷಯ ತಿಳ್ಕೊಂಡಿದ್ದಾರೆ ಅವಳ ಖಾತೆಗೆ ಈ ನಿನ್ನೆ ಮೂವತ್ತೈದು ಸಾವಿರ ಸೇರಿತು "
    ಅಷ್ಟು ಫೇಮಸ್ ಅವಳು . ಅವಳಿಗೆ ಮೂವತೈದು ಯಾವಲೆಕ್ಖ..? ಎಷ್ಟೂ ಸೇರಿಸಬಹುದು....!!!
    ಈಗ ಬ್ಯಾಂಕು.... ನಾಳೆ ಮನೆ ಅಲ್ಲವಾ,...?
    ಈಗ ಯಾಕೋ ಎಲ್ಲೋ ತ್ಯಾಂಪನಿಗೆ ಎಡವಟ್ಟಾಗಿದೆ ಎಂದನ್ನಿಸಿತು.
    ಹೌದು...ಅಲ್ಲಾ.... ಅವಳು...
    ಅಯ್ಯೋ ಹೋಯ್ತು ನನ್ನ ಬಾಳೇ ಸರ್ವ ನಾಶನವಾಯ್ತು, ನೋಡಪ್ಪಾ ನಿನ್ನ ಅಂಕಲ್ ಮನೆಗೆ ಸವತಿ ತಂದರು, ನಿನ್ನೆ ಅವಳ ಬ್ಯಾಂಕ್ ಖಾತೆಗೆ ಮೂವತೈದು ಸಾವಿರ ಹಾಕಿದ್ದರು, ಇಂದು ಕೇಳಿದರೆ ಈ ತರ, ಯಾವತ್ತಿಂದ ನಡೆಯುತ್ತಿತ್ತೋ ಗೊತ್ತಿಲ್ಲಾ, ಏನೋ ಇವತ್ತು ನನಗೆ  ಗೊತ್ತಾಯ್ತು ಇಲ್ಲವಾದರೆ .... ಎಷ್ಟು ದಿನದಿಂದ ನಡೆಯುತ್ತಿತ್ತೋ ಈ ನಾಟಕ, ... ಇದು ಅತೀ ಆಯ್ತು..... ಇಲ್ಲ ಒಂದೂ ಅವಳಿರಬೇಕು ಇಲ್ಲಾ ನಾನು,  ನೋಡೇ ಬಿಡೋಣ ಇಲ್ಲಾಂದರೆ ಡೈವೋರ್ಸೇ...
    ಅವಳ ಕೋಪ ತಾರಕಕ್ಕೇರಿತು.
    ಆದರೆ ಅದು ವಿಪರೀತಕ್ಕಿಟ್ಟುಕೊಂಡದ್ದು ಅವಳು ನಿದ್ದೆ ಮಾತ್ರೆ ತಿಂದು ಆಸ್ಪತ್ರೆಗೆ ಸೇರಿದಾಗಲೇ...
    ಏನೂ ತ್ಯಾಂಪಿ ನಿದ್ದೆ ಮಾತ್ರೆ ತಿಂದು ಆತ್ಮ ಹತ್ಯೆಗೆ ಪ್ರಯತ್ನ ಮಾಡಿದ್ದಳಾ...? ಸಾಧ್ಯವೇ ಇಲ್ಲ, ಒಂದು ಸಣ್ಣ ಗಾಯ ಆದರೆ ಸಹಿಸೋಳಲ್ಲ, ಹಾಗಿರುವಾಗ, ಅವಳ ಸ್ಪಾ ದ ಅಣ್ಣಂದಿರೇ  ಏನೋ ಮಸಲತ್ತು ಮಾಡಿರ ಬೇಕು ತ್ಯಾಂಪನಿಗೂ  ಅವರಿಗೂ ಮೊದಲಿನಿಂದಲೂ ಎಣ್ಣೆ ಸೀಗೆ ಸಂಬಂಧ.

    "ಅಲ್ಲವೋ ಒಂದು ವಿಷಯ ಅರ್ಥವಾಗಲಿಲ್ಲ ನಿನ್ನ ಬೆಳ್ಳಿ ಮೋಡದ ಕಲ್ಪನಾ ಸತ್ತು ಮಣ್ಕಚ್ಚಿ ಸುಮಾರ್ ವರ್ಶವೇ ಆಗಿತ್ತಲ್ಲ ಮರಾಯಾ" ಶೀನನೆಂದ.
    "..ಅದೇ ನಾನು ಹೇಳ ಹೋಗಿದ್ದೆ  ಆದರೆ ಅವಳು ಕೇಳಿಸಿಕೊಳ್ಳಲೇ ಇಲ್ಲವಲ್ಲ.ತುಂಬಾನೇ ಸಂಶಯದವಳು ತ್ಯಾಂಪಿ,.."
    "ಅದು ಸರಿ ಆ ಹಣದ ವಿಷಯವೇನು?"
    "ಅದೇ ಗೊತ್ತಾಗ್ಲಿಲ್ಲ, ಪ್ರಾಯಶಃ ಆದಿನ ನನ್ನ ಪಾಸ್ ಬುಕ್ ನಾನು ಮರೆತು ಬ್ಯಾಂಕನಲ್ಲೇ ಬಿಟ್ಟು ಬಂದಿದ್ದೆ, ಆ ಬ್ಯಾಂಕ ಮೆನೇಜರ್ ನನ್ನ ಪಾಸ್ ಬುಕ್ ಬದಲಿಗೆ ಅದ್ಯಾರೋ ಕಲ್ಪನಾ ನ ಪಾಸ್ ಬುಕ್ ತಂದು ನಮ್ಮನೆಗೆ ಕೊಟ್ಟಿದ್ದ "
    "ಅಂದರೆ ನಿನ್ನ ಪಾಸ್ ಬುಕ್ ಕಲ್ಪನಾಳಿಗೆ ಸಿಕ್ಕಿತಾ..?"
    "ಹೌದು ಇಷ್ಟೇ ವಿಷಯ ಆಗಿದ್ದು. ಮಾರನೆಯ ದಿನವೇ ಆತ ಬಂದು ವಿಷಯ ತಿಳಿಸಿ ಹೇಳಿದ್ದ, ಆದರೆ ತ್ಯಾಂಪಿ ಕೇಳಿಸಿಕೊಳ್ಳಲೇ ಇಲ್ಲ, ನಾನೂ ಆ ಬ್ಯಾಂಕ್ ಮನೇಜ್ರೂ ಮತ್ತೆ ಆ ಸವತಿಯೂ ಸೇರಿಯೇ  ಏನೋ ಮಸಲತ್ತು ಮಾಡಿದ್ದೇವೆ ಎಂದುಕೊಂಡಿದ್ದಾಳೆ."
    ಅಲ್ದನಾ  ಆ ಕಲ್ಪನಾ ಳನ್ನೇ ಕರ್ಕಂಡ್ ಬಂದ್ ತ್ಯಾಂಪಿಗೆ ಹೇಳ್ರೆ..?ಶೀನನೆಂದ
    ಕೊಂದು ಹಾಕಿಯಾಳು ಬೇಡಪ್ಪಾ ಬೇಡ , ನಮಗಾಗಿ ಆ ಪಾಪದ ಕಲ್ಪನಾನ ಯಾಕೆ ಗೋಳುಹೊಯ್ಕೋಬೇಕು..?
    "ಅಂದ ಹಾಗೆ ಆ ಪಾಪದ ಕಲ್ಪನಾ ಯಾರು ಗೊತ್ತಾ ನಿಂಗೆ"
    "...ಇಲ್ಲ " ತಡವರಿಸಿದ ತ್ಯಾಂಪ,
    "ಹೆಣ್ಣುಗರುಳು ಪಾಪ ಹೊರ್ಗಿನ್ ಎಲ್ಲ ಹೆಂಗ್ಸರೂ ನಿಂಗೆ ಪಾಪವೇ ಅಲ್ದಾ..?ಯಾಕೋ ಸುಳ್ ಹೇಳ್ತೀಯಾ..?" ಬಡ ಪೆಟ್ಟಿಗೆ ಶೀನ ಯಾರನ್ನೂ ಬಿಡೋನಲ್ಲ.
    "ಅದೇ ಆ ದಿನ ಹೋಟೆಲ್ ನಲ್ಲಿ ಪಾಯಸಕ್ಕೇ ಟಪ ಟಪಾ ಅಂತ ಕರಿ ಮೆಣ್ಸು ಹಾಕೋತ್ತಿದ್ದೀಯಲ್ಲಾ ಅವಳೇ ಅಲ್ಲವಾ ..? ಶೀನ.
    "ಎಂತದಾ ... ಪಾಯ್ಸಕ್ಕೆ ಮೆಣ್ಸಾ,,...?
    "ಅದೇ ನಾನೂ ಇಂವ ಆ ದಿನ  ಊಟಕ್ಕೆ ಹೊರ್ಗ್ ಹೋದ್ವಾ ........ಶೀನ ಆದಿನ ನೆನಪು ಮಾಡಿಕೊಂಡ
    "ಆ ದಿನ ನಾವಿಬ್ರೂ ಒಂದೇ ಟೆಬಲ್ಲಿನಲ್ಲಿದ್ವಿ....ಊಟದ ತಟ್ಟೆ ಬಂತು, ಮಾತಾಡ್ತಾ ಅಡ್ತಾ ತ್ಯಾಂಪ ಪಕ್ಕದ ಪೆಪ್ಪರ್ ಶೀಶೆ ತಕಂಡ, ಮೊಸರಿಗ್ ಹಾಕುಕೆ,  ಯಾಕೋ ಹಾಕ್ತ ಬದಿಗೆ ತಿರ್ಗ್ದಾ,  ಕೈಯಲ್ಲಿ ಎಂತ್ ಇತ್ತ ನೆನ್ಪೇ ಹೋಯ್ತ್, ಕಟ ಕಟ ಕಟಾ ಅದರಿಂದ ಕೊಡ್ಕಿದ್ದೇ ಕೊಡ್ಕಿದ್, ಬಿಳಿ ಪಾಯಸ ಕಪ್ಪಾಯ್ತು.
     "ಏನಿದೂ ನೀವು ಪೆಪ್ಪರ್ ಪಾಯಸಕ್ಕೆ ಹಾಕ್ಕೋಳ್ತಿದ್ದೀರಾ..?
    ಪೆಚ್ಚು ಪೆಚ್ಚಾಗಿ ನಗುತ್ತ ತ್ಯಾಂಪನೆಂದಿದ್ದ ,
    "ಇಲ್ಲ ಕಲ್ಪನಾ ಅದು ನನ್ನ ಹವ್ಯಾಸ, ಹೀಗೆ ಎಲ್ಲದಕ್ಕೂ ಪೆಪ್ಪರ್ ಹಾಕ್ಕೊಳ್ಳೋದು, ಆರೋಗ್ಯಕ್ಕಾಗಿ... ಹ್ಹೀ ಹ್ಹೀ
     ......  ಅವಳೇ ಅವಳೇ...
    ಅಲ್ಲಾ ನೀನು ನಿಜವಾಗಿಯೂ ಅವಳ ಖಾತೆಗೆ.....
    ಶೀನ ನನ್ನನ್ನು ಸುಮ್ಮನಿರಿಸಿದ.


    ತ್ಯಾಂಪನ ರಾಮಾಯಣ    4




    ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್    2



    ಆಗಲೇ....."ಏನೂ ಮಿಲಿಟರಿಯವರು ಪೋಲೀಸ್ ಸ್ಟೇಷನ್ ಗೆ..."
    ಗಣೇಶ...!!! ನಾನೂ ಅವನೂ ಒಟ್ಟೋಟ್ಟಿಗೇ ಸೇರಿದ್ದೆ ಅವನು ಪೋಲೀಸ್ಗೆ ನಾನು ಮಿಲಿಟರಿಗೆ, ನನ್ನದು ನಿವ್ರತ್ತಿಯಾಗಿತ್ತು , ಆತನಿನ್ನೂ ಕೆಲ್ಸದಲ್ಲಿದ್ದ.
    ನನ್ನ ಸ್ನೇಹಿತ ನೊಬ್ಬನನ್ನು ಇಲ್ಲೆ ಸೇರಿಸಿದ್ದೀರಲ್ಲಾ ಅವನನ್ನು ಬೀಡಿಸಿಕೊಳ್ಳಲು ಬಂದಿವಪ್ಪಾ...
    "ಸಾದ್ಧ್ಯವೇ ಇಲ್ಲ ಬಿಡು , ಅವನ ಹೆಂಡತಿಯೇ ಕೇಸ್ ಜಡಿದಿದ್ದಾಳಲ್ಲ, ಜಗಳ ಮಾನಸಿಕ ಹಿಂಸೆ.....!!!!"
    "ಹಾಗೇನಿಲ್ಲ ಇವರದ್ದು ಪ್ರೇಮ ವಿವಾಹವಪ್ಪಾ?"
    "ಅದೇ......!   ಈಗ ಬರುವ ಡೈವೋರ್ಸ್ ಕೇಸಲ್ಲಿ ಹೆಚ್ಚಿನವು ಪ್ರೇಮ ವಿವಾಹಗಳೇ,.....     ಅದರಲ್ಲೂ ಈ ಕೇಸಿನ ವಿಷಯವೇ ಬೇರೆ..!!
    ಏನದು...?
    "ಇವನ ಹೆಂಡತಿಯೇ ಪ್ರಪಂಚದ ಯಾವ ಹೆಂಗಸೂ ಈತನನ್ನು  ಸಂತೋಷ ಪಡಿಸಲಾರಳು"    ಎಂದು ಬರೆದಿದ್ದಾಳೆ
    ಈ ವಿಷಯದ ಒಳ ಅರ್ಥ ಮತ್ತು ಹಿಂಸೆಯ ಸಾಧ್ಯತೆ ಬಾಧ್ಯತೆ ಕುರಿತು ಮಾತು ಕತೆ ಪತಿ ಪೀಡಿತರ ಸಂಘದ ಅಧ್ಯಕ್ಷೆಯ ಜತೆ  ನಡೆಯುತ್ತಿದೆ, ಪ್ರಾಯಶಃ ಯಾವ ಇನ್ಫ್ಲುಯೆನ್ಸೂ ಈತನನ್ನು ಬಿಡಿಸಲಾರದು.
    ಶೀನ ನೂ ನಾನೂ ಅವಾಕ್ಕಾದೆವು
    ಬೇರೆ ದಾರೀನೇ ಇಲ್ವಾ ಹಾಗಾದ್ರೆ ಗಣೇಶಣ್ಣಾ..?"
    ಒಂದ್ ದಾರಿ ಇತ್ತಾ.... ಆದ್ರೆ ಆಪೂದಲ್ಲ ಹೋಪುದಲ್ಲಾ...?!??"
    "ಯಾಕೆ..... ನೀ ಹೇಳ್  ಕಾಂಬೋ! ಅದ್ ಎಂತ ಆರೂ ಅಡ್ಡಿ ಇಲ್ಲೆ,.....  ನಾ ಮಾಡ್ತೆ !!"
    "ಹ್ಯಾಂಗಾರೂ ಮಾಡಿ ,ಆ ಕಂಪ್ಲೇಂಟ್ ವಾಪಾಸ ತಕಳ್ಳು ಹಾಗೆ ಮಾಡ್ರೆ...!!!.....??"
    "ಅದ್ ಹೇಂಗಾತ್..? ಈ ತ್ಯಾಂಪನ ಮುಖಾನೇ ಕಾಂತಿಲ್ಲೆ (ಮುಖವನ್ನೇ ನೋಡೋಲ್ಲ) ಅಂತ ಕೂತಿದ್ದಾಳೆ ಅವ್ಳ್!!  ಆ ಶನಿ ಅಣ್ಣಂದಿರೂ ಅಷ್ಟೇ, ಇವ್ನ್ ಮುಖ ಕಂಡ್ರ್ ಆತಿಲ್ಲೆ ಅವಕ್ಕೆ."
    ".............................................................................................."
    ಶೀನನ ಮುಖದಲ್ಲೊಂದು ತೆಳುನಗೆ ಹಾದು ಹೋಗಿದ್ದು ನೋಡಿದ್ದು ನಾನು ಮಾತ್ರ!!! ...
    ಅಂದರೆ ಶೀನನಿಗೆ ಉಪಾಯ ಹೊಳೆದಿತ್ತಾ,,,,?




    ತ್ಯಾಂಪನ ರಾಮಾಯಣ    5






    ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್    3




    ಅದೆಂತ ಗಣೇಶರ ರಾಗಿ ಮುದ್ದೆ ಕಥೆ ಮಾರಾಯಾ.....?
    ಅದೇ ಶೀನ........... ಈ ಮಂಜಣ್ಣ....!
    ಯಾರು ದುಬಾಯ್ ಮಂಜಣ್ಣನಾ..?
    "ಹೌದು ಅವರು ಊಟಕ್ಕೆ ಕರೆದಿದ್ದಾರೆ, ಅದೂ ಅವರ ಫೇವರಿಟ್ ರಾಗಿ ಮುದ್ದೆ ಊಟಾನೇ.... ಗಣೇಶರ ಅರ್ಥ ನಂಗೆ ರಾಗಿ ಮುದ್ದೆ ಹಿಡಿಸಲ್ಲ ಅಂತ.
    ಆ ಊಟ , ರಾಗಿ ಮುದ್ದೆ ಎಲ್ಲ ಪಕ್ಕಕ್ಕಿರಲಿ, ಹೆಂಗಾರೂ ಮಾಡಿ ಈ ಗಣೇಶರು ಯಾರು ಅಂತ ಕಂಡು ಹಿಡಿಯೋದೇ ನಿಂಗೆ ಮುಖ್ಯ ಅನ್ನಿಸುತ್ತೆ ನಂಗೆ.
    ಅದಕ್ಕೇನಾ , ಆ ನಾಡಿಗರನ್ನ ಕೇಳ್ರ್ ಆಯ್ತಪ್ಪ..,
    ಅದೆಲ್ಲಾ ತೀರಾ ಪರ್ಸನಲ್ ವಿಷಯ, ಹಾಂಗೆಲ್ಲ ಅವ್ರಿವ್ರ್ ಯಾರ್ ಅವ್ರ ಯಾರ್ ಅಂದೆಳಿ ಬೇರೆ ಯಾರಿಗೂ ಹೇಳುದಿಲ್ಲೆ.
    ಹಾಂಗಾರೆ ಈ ನಮ್ ಪೋಲೀಸ್ ಗಣೇಶನ್ನ ಅವ್ರ ಹಿಂದೆ ಛೂ ಬಿಟ್ಟರೆ..?
    ಬ್ಯಾಡ್ದಾ!!! ಎಂತ ಹೇಳೂದ್ ನೀನ್...!!!
    ಅಂದ್ರೆ ನಿನ್ಕಥಿ ಈರ್ಬದ್ರಣ್ಣ ನ್ ಕಥಿ ಕಣಂಗೇ ಆಯ್ತ್ ಅಲ್ದಾ..?
    ಅದೆಂತ ವೀರಬದ್ರಣ್ಣ್ ನ್ ಕಥಿ..?
    ನಮ್ ಐತೂ ಇದ್ನಲ್ಲೆ.....
    ಯಾರ್... ಅದೇ  ಒಡೆಯ ಒಡತಿ ಚಪಾತಿ ಮಾಡ್ತ್ರ ಅಂಬ ಬದ್ಲಿಗೆ ಇದ್ದೆಲಾ ದೆತ್ತಿಲಾ ತಪಸ್ಸ್ ಮಲ್ತೋಂತಿತ್ತೆರ್** ಅಂತ ಊರೆಲ್ಲಾ ಪ್ರಚಾರ ಮಾಡಿದ್ದನಲ್ಲಾ....ಅವ್ನೇಯಾ..?
    ಹೌದ ಅವ್ನೇಯಾ.  ಗಣಪನ ಮನಿಗೆ ಪ್ಯಾಟೆಯಿಂದ ಈರ್ಬದ್ರ ಬಂದಿದ್ದ ರಜೆಯಲ್ಲಿ. ಇಲ್ಲಿನ್ ಕಣ್ಕಟ್ಟೂ ಹಸ್ರ, ಗಾಳಿ, ಗೆದ್ದಿ ಬಯ್ಲ್, ತೋಟ, ಎಲ್ಲ ಕಣ್ಕಂಡ್ ಲಾಯ್ಕ್ ಆಯ್ತ್ ಅವ್ನಿಗೆ, (ಇಲ್ಲಿನ ವಾತಾವರಣ , ಕಣ್ಣಿಗೆ ಕಂಡಷ್ಟೂ ಹಸಿರು ಗದ್ದೆ ತೋಟ, ಮನುಷ್ಯನಿಗೂ ಪ್ರಕೃತಿಗೂ ನಡುವಿನ ಹೊಂದಾಣಿಕೆ ಹಳ್ಳಿಯ ಸರಳ ಜೀವನ, ಮನುಷ್ಯ ಸಂಬಂಧಗಳ ಆತ್ಮೀಯತೆ ಎಲ್ಲ ಮಾರುಹೋಗಿದ್ದ.)
     ಪಕ್ಕದ ಐತು ಹತ್ತಿರ ದಿನಾ ಕೇಳೋನು ತಿಂಡಿ ಎಂತ..?  ( ಹಾಗೆ ಕೇಳಲು ಮಾತ್ರ ಕಲ್ತಿದ್ದನಾತ)
    ಐತು ಹೇಳ್ತಿದ್ದ ದಿನಾ "ಕೊಚ್ಚಕ್ಕಿ ಗಂಜಿ",
    ಇದು ಕೇಳಿ ಕೇಳಿ, ಪ್ಯಾಟಿಯ ಈರ್ಬದ್ರನಿಗೆ ಆಸೆ ಆಯ್ತು, ಅದೇನೋ ದೊಡ್ಡ ಕಜ್ಜಾಯದ ಹಾಗೆ ,ದೊಡ್ಡ ವಿಶೇಷ ಬಕ್ಷದ ಹಾಗೆ ಅನ್ನಿಸಿ, ನಂಗೂ ತಿನ್ನ ಬೇಕಾ ಗಂಜಿಯನ್ನ, ಅಂದ ನನ್ನ ಹತ್ರ.
    ಅದಕ್ಕೇನ್ ನಾಳೆಯೇ ಬಾ ಅಂದೆ ನಮ್ಮಲೆಲ್ಲ ಅದೇ ಅಲ್ದಾ ದಿನ್ದ್ ಬಕ್ಷ.
    ಮಾರನೆಯ ದಿನ ಹೊಸ ಮದ್ಮಗ ಬಂದ್ ಹಾಗೇ ಬಂದ ಈರ್ಬದ್ರ ನಮ್ ಮನಿಗೆ ಬೆಳಿಗ್ಗೆಯೇ.
    ಸರಿ ಎಲ್ರಿಗೂ ಬಟ್ಲ್ ಹಾಕಿ , ನಾನೂ ಪಿಣಿಯಣ್ಣ ಮುತ್ತ ಎಲ್ರೂ ಕೂತ್ಕಂಡ್  ಗಂಜಿ ಬಟ್ಲಗೆ ಹಾಯ್ಕಂಡ್ ಸೊರ ಸೊರ ಸುರುಕೇ ಶುರು ಮಾಡ್ಕಂಡೋ.
     ಅವ್ನಾ ಕೂತ್ಕಂಡ್ ದ್ದೇನೋಸರಿ,ಆದ್ರೆ  ಆ ಗಂಜಿ ಇವ್ನ ಗಂಟ್ಲಗೆ ಇಳೀಯೂದೇ ಇಲ್ಲ್ಯಲ್ಲೆ... ಗಟಗಟ ಒಂದ್ ಎರ್ಡ್ ಚಂಬ್ ನೀರ ಬಾಯಿಗ್ ಸುರ್ಕಂಡ್ರೂ .........ಉಹ್ಞು... ಜಪ್ಪಯ್ಯ ಅಂದ್ರೂ...ಒಳ್ಗ್ ಹೋತೇ ಇಲ್ಲೆ, ಕಥಿ ಹೈಲ್ ಎಂತ್ ಮಾಡೂದಾ....!!!
    ಹ್ಯಾಂಗೋ ಬಟ್ಲ್ ಖಾಲಿ ಮಾಡ್ದ್ರೂ  ಗಣಪನ ಮನಿ ಹಿತ್ಲಂಗೇ ಪೂರ್ತಿ ಹೊಟ್ಟಿ ಖಾಲಿ ಮಾಡ್ಕಂಡ ಅಂಬ್ರ. ( ವಾಂತಿ), ಯಾಕೋ ಹದ್ನೈದ್ ದಿನ ಇರ್ಕ ಅಂದೇಳಿ ಬಂದವ ಮಾರನೇ ದಿನವೇ ಕುಂಡೀಗ್ ಕಾಲ್ ಕೊಟ್ಟ್ ಹಾರದ್ಯಾಕೆ ಅಂತ ಇವತ್ತಿಗೂ ಐತಂಗೆ ಅರ್ಥ ಆಯ್ಲೇ ಇಲ್ಲೆ ಅಂಬ್ರಾ.
    ಅದಕ್ಕೇ ಇರ್ಕ್ ,  ಈ ಗಣೇಶಣ್ಣ... ನಿಂಗೆ ..ಹೀಂಗಾಪುದ್ ಬ್ಯಾಡ.... ಮೊದಲೇ ಕಲ್ತ್ಕೋ ಅಂದೇಳಿ ಹೀಂಗ್ಘೇಳಿರ್ಕ್.




    ತ್ಯಾಂಪನ ರಾಮಾಯಣ    6




    ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್   4




    ಏಯ್ ಈ ದಕ್ಷಿಣ ಮುಖ ನಂದೀಶ್ವರ ದೇವಸ್ತಾನಕ್ಕೆ ಹೋಪುಕಿತ್ತಲೆ ನಾಳಿಗೆ.
    ಅದೆಂತದಾ ತ್ಯಾಂಪನ್ನ ಜೈಲಗ್ ಹಾಕಿದ್ರೆ ನಿಂಗೆ ದೇವರ್ ಮೇಲೆ ನಂಬ್ಗೆ ಜಾಸ್ತಿ ಆಯ್ತಾ  ಹೆಂಗೆ..?
    ಅಲ್ಲಿಗ್ ಹ್ಯಾಂಗ್ ಹೋಯ್ಕ್ ಹೇಳ್..
    ಅದಕ್ಕೇನ್ ಸಂಪಿಗೆ ರಸ್ತೆಯಲ್ಲಿನ ೧೧ ನೇ ಕ್ರಾಸಿನಲ್ಲಿ ಕೆಳಗಿಳಿದರೆ ಎರಡನೆಯ ಅಡ್ದ ರಸ್ತೆಯೇ( ಅದರಲ್ಲೇ ಕೆನರಾ ಬ್ಯಾಂಕ್ ಸಹಾ ಇದೆ) ಮೊದಲನೆಯ ದೇವಸ್ತಾನದ ರಸ್ತೆ ಅದರಲ್ಲಿ ೧೮ ನೇ ಕ್ರಾಸ್ ದಿಕ್ಕಿಗೆ ಹೋದರೆ ಅಲ್ಲಿ ದೇವಸ್ತಾನಗಳ ಸಮುಚ್ಚಯವೇ ಇದೆ, ಸುಂದರ ವಾತಾವರಣ, ಕಣ್ಣಿಗೆ ಕಟ್ಟುವ ಹಸಿರು, ಪುಷ್ಕರಿಣಿಯಿಂದ ಆವರಿಸಿದ ಈ ದಕ್ಷಿಣ ಮುಖ ನಂದೀಶ್ವರ ದೇವಸ್ತಾನ ಕ್ಕೆ ಸುಮಾರು ೯೦೦ ವರ್ಷಗಳ ಇತಿಹಾಸವಿದೆ. ನಂದಿಯ ಮುಖದಿಂದ ಬಿದ್ದ ನೀರು ಶಿವಲಿಂಗವನ್ನು ಸದಾ ಅಭಿಷೇಕ ಮಾಡುತ್ತಿರುತ್ತದೆ, ಇಲ್ಲಿನ  ನಂದಿಯ ಕಿವಿಯಲ್ಲಿ ಏನಾದರೂ ಬೇಡಿಕೊಂಡರೆ ಅದು ನಿಜವಾಗುತ್ತದೆಂತ ನಂಬಿದವರು ಹೇಳುತ್ತಾರೆ.ಬೇಕಾದರೆ ಅತ್ತಿಗೇನ ಕರ್ಕೊಂಡ್ ಹೋಗು, ಅವಳಿಗೆ ಆ ದೇವರು ಅಂದರೆ ತುಂಬಾ ನಂಬಿಕೆ, ಅಲ್ಲಿನ ಪೂಜೆಯವರೂ ನಮ್ಮ ಶೄಂಗೇರಿ ಕಡೆಯವರು. ನಂಗೆ ಬರಲು ಪುರ್ಸೊತ್ತಿಲ್ಲ ಮರಾಯಾ.
    ಅಕ್ಕ...


    ********************                            ********************

    "ಆ ವಿಷಯ ನಿಮ್ಗೆ ಹ್ಯಾಗೆ ಗೊತ್ತಾಯ್ತು ಹೇಳ್ತೀರಾ? ಅದೇ ಆ ಕಂಪ್ಲೆಂಟ್ ನಲ್ಲಿ ಬರೆದ ವಿಷಯ..? ಅಂದರೆ ಇದರ ಅರ್ಥ...
    ಒಂದೋ ನಿಮಗೆ ತುಂಬಾ ಜನ ಪುರುಷರು ಗೊತ್ತಿರಬೇಕು, ಅಥವಾ ಅವನಿಗೆ ತುಂಬಾ ಜನ ಹೆಂಗಸರ ( ನಿಮಗೆ ಗೊತ್ತಿರುವಂತಹ) ಸಂಭಂಧ ವಿರಬೇಕು.
    ಎರಡನೆಯದಂತೂ ಸಾಧ್ಯವೇ ಇಲ್ಲ, ನೀವು ತ್ಯಾಂಪನನ್ನು ಮದುವೆಯಾಗಿದ್ದೇ ಅದಕ್ಕಾಗಿ..
    ಇನ್ನುಳಿದದ್ದು ಮೊದಲನೆಯದ್ದು. ಒಂದು ವೇಳೆ ನೀವು ಕೋರ್ಟಿಗೆ ಹೋದರೆ ಈ ತ್ಯಾಂಪನ ಹತ್ತಿರದವ... ಅದೇ   ಆ ಗಣೇಶ ಇದೇ ವಿಷಯವನ್ನು ಜಗಜ್ಜಾಹೀರು ಮಾಡಿ ನಿಮ್ಮ ನಿಮ್ಮಣ್ಣನ ಇರೋ ಮಾನಾನೆಲ್ಲಾ ನಡು ಬೀದಿಯಲ್ಲಿ ಹರಾಜು ಹಾಕ್ತಾನೆ , ನೋಡಿಕೊಳ್ಳಿ ಒಂದು ಸಾರಿ ಆ ಗಣೇಶನಿಗೆ, ( ಆ ದಬಾಂಗ್, ಕೆಂಪೇಗೌಡ ಸ್ಟಯಿಲ್ ನವ- ಕಾಪಿ ರೈಟ್ ಗಣೇಶರು) ನಿಮ್ಮ ಮೇಲೆ ಒಳ್ಳೇ ಅಭಿಪ್ರಾಯ ಬರಲಿಲ್ಲ ಅಂದುಕೊಳ್ಳಿ... ಮತ್ತೆ ನನ್ನ ಅಂದ್ಕೋ ಬೇಡೀ ನಾನು ನಿಮ್ಮನ್ನ ಮೊದಲೇ ಎಚ್ಚರಿಸಲಿಲ್ಲ ಅಂತ...ಮೊನ್ನೆ ಮೊನ್ನೆ ನೆನಪಿದೆಯಲ್ಲಾ.... ಆ "ಅಗಡೀ ಸ್ಪಾ" ದ ಮೇಲೆ  ಧಾಳಿ ಮಾಡಿ ಅದರಲ್ಲಿ ಅವ್ಯವಹಾರ ನಡೀತದೇ ಅಂತ ಪೇಪರ್ನಲ್ಲೆಲ್ಲಾ ಕೊಟ್ಟೂ..... ಆ ಅಗಡಿಯವನ್ನ ( ಸ್ಪಾ ದ ಯಜಮಾನ) ಬೆಂಗಳೂರು,... ಯಾಕೆ ಕರ್ನಾಟಕವನ್ನೇ ಬಿಟ್ಟು ಓಡಿ ಹೋಗುವ ಹಾಗೆ ಮಾಡಿದ್ದು ಯಾರಂದ್ಕೊಂಡ್ರೀ..?
    ಯಾ..ಯಾರು...?
    "ಇದೇ ಈ ಗಣೇಶನೇ,,( ಆ ದಬಾಂಗ್, ಕೆಂಪೇಗೌಡ ಸ್ಟಯಿಲ್ ನವ- ಕಾಪಿ ರೈಟ್ ಗಣೇಶರು)"
    ಮತ್ತೆ ಆ ಜಪದ ಸ್ವಾಮೀನ ನಮ್ ಹೆಂಡ್ತೀ ಮನೆಯಿಂದ್ ಓಡ್ಸೂಕೆ ಯಾರ್ ಸಹಾಯ ಮಾಡ್ದ್ ಅಂಡ್ಕಂಡ್ರೀ..?
    "ಇದೇ ಈ ಗಣೇಶನೇ,,( ಆ ದಬಾಂಗ್, ಕೆಂಪೇಗೌಡ ಸ್ಟಯಿಲ್ ನವ- ಕಾಪಿ ರೈಟ್ ಗಣೇಶರು)"
    ಇನ್ನು,,,,,,,,, ಪಕ್ಕದ ಓಣೀಲಿ..... ಬೇಡ ಬಿಡಿ ಇನ್ನು ನಿಮ್ಮಿಷ್ಟ,"  
    "ಶೀನಣ್ಣಾ ಹಾಗಾದರೆ ನಾನೀಗ ಏನು ಮಾಡಬೇಕು ಹೇಳು" ( ಗಾಡಿ ರಸ್ತೆಗಿಳಿಯಿತು)
    ನೋಡಮ್ಮಾ, ಇದು ತುಂಬಾ ಸರಳ, ನೀನು ಮಾಡಬೇಕಾದುದಿಷ್ಟೇ..., ನಿನ್ನ ಅಣ್ಣಂದಿರ್ಯಾರಿಗೂ ಹೇಳದೇ ಹೋಗಿ ಆ ಕಂಪ್ಲೆಂಟ್ ವಾಪಾಸ್ ತಗೋ.... ಅಷ್ಟೇ"
    ಚೆಕ್ ಮೇಟ್!!!!

    ********************                            ********************

    ತ್ಯಾಂಪಿ ನಿನ್ಮೇಲೆ ನಂಗೆ ಮನಸ್ಸೈತಿ...ಕಣ್ತುಂಬ ನಿನ್ಗೊಂಬೆ ತುಂಬೈತೆ  

    ಮೆಲುದನಿಯಲ್ಲಿ ಹಾಡು ಮನೆಯಲ್ಲಿ ತ್ಯಾಂಪನ ಸ್ವರ

    ಜತೆಯಲ್ಲೇ ಪಟ ಪಟ ಶಬ್ದ..

    ಹೊಡೆದಾಟ...?

    ನಾನು ಎದ್ದೆ



    ಬೇಡ ವೆಂದು ಶೀನ ಕಣ್ಣಲ್ಲೇ ಸನ್ನೆ ಮಾಡಿದ...

    ಇದು ತ್ಯಾಂಪ ತ್ಯಾಂಪಿಯರ ಸರಸದ ಮೊದಲಿನ ವಿರಸ.

    ಮೊದಲ ವಿರಸದ ಅಂತ್ಯದ ಆರಂಭ.

    ಅಲ್ಲಾ ಶೀನ.....  ತ್ಯಾಂಪಿ ದಕ್ಷಿಣ ಮುಖ ನಂದಿ ದೇವಸ್ತಾನಕ್ಕೇ ಹೋಗುತ್ತಾಳೆ ಅಂತ ನಿನಗೆ


    ಹೇಗೆ ಗೊತ್ತು..?

    ಅದೂ ಅಲ್ದೇ ನೀನ್ ಹೇಳಿದ್ದೆಲ್ಲಾ ನಂಬಿ ಆ ಕಾಗ್ದಾ ವಾಪಾಸ್ ತಕಳ್ತ್ಲ ಅಂತ ಎಂತ  


    ಗ್ಯಾರಂಟೀ..ಇತ್ತಾ?

    "ಅವ್ಳ್ ಸ್ವಂತ ಬುದ್ದಿಯಿಂದ ಆಕಾಗ್ದ ಬರ್ರೀಲಿಲ್ಯಾ,  ಅಲ್ದೇ  ನನ್ನ ಹೆಂಡ್ತಿ ಮತ್ತು ತ್ಯಾಂಪಿ 


    ಸಣ್ಣಿಪ್ಪತಿ ಗಿಂದ ಸ್ನೇಹಿತೆಯರ್ ಮರಾಯಾ".

    ದೊಡ್ಡ ಭಾರ ಇಳಿದ ಖುಷಿಯಿಂದ ಶೀನ ಊರಿಗೆ ಹೊರಟ,

    ನಾನು...... ರಾಗಿ ಮುದ್ದೆ ಜೀರ್ಣ ಮಾಡಿಕೊಳ್ಳುವುದು ಹೇಗೆ ಎಂಬ ಪುಸ್ತಕ ಕೈಗೆ 


    ತೆಗೆದುಕೊಂಡೆ.

    ಛಾಲೇಂಜ್ ಪುನಹ ಶುರು.....!!!!!!!!!!!!?????????????