ನಾನೂ ನನ್ನ ಬಾಸೂ


 

 

ನಾನೂ ನನ್ನ ಬಾಸೂ 1

ನನ್ನು ಆಫೀಸಿಗೆ  ತಲುಪುತ್ತಿದ್ದಂತೆ   ನನ್ನ ಬಾಸ್ ಕಲ್ಲೂರಾಮ್ ದನಿ ಕೇಳಿಸಿತು.
"ಚಂದ್ರೂ ನೋಡು ರಾವ್ ಈಗ್ಲಾದರೂ ಬಂದ್ರಾ?" ಚಂದ್ರೂ ಉತ್ತರಿಸೋದ್ರಲ್ಲಿ ನಾನು ಡೈರಿ ತೆಗೆದುಕೊಂಡು ಕಲ್ಲೂರಾಮರ ಇದಿರಿದ್ದೆ.
" ಏನ್ರೀ ರಾವ್ ಅವರೇ ನಿನ್ನೆ ಬೇಗ ಮನೆಗೆ ಹೋದಿರಂತೆ??
ಅಂದರೆ ಪ್ರಾಣಿ ಸಿಟ್ಟಲ್ಲಿಲ್ಲ!(ಇವರೂ ಸಹ ಸಿಟ್ಟಲ್ಲಿದ್ದಾಗ ಇದಿರಿನ ವ್ಯಕ್ತಿಗೆ ಏಕವಚನದ ಪ್ರಯೋಗ).
"ಯಾರು ಹೇಳಿದ್ದು ಸಾರ್ ತಮಗೆ" ನಾನೂ ಏರಿಸಿದೆ, ಬಾಸ್ ನ್ನು.
"ಯಾರೂ ಯಾಕೆ ಹೇಳಬೇಕು? ಏನು ಅದನ್ನೂ ನನ್ನ ಬಾಯಿಯಿಂದಲೇ ಹೊರಡಿಸ್ತೀರೇನು?"
ಕಲ್ಲೂರಾಮ್ ಗಲಿಬಿಲಿಗೊಂಡನಾ ಹೇಗೆ? "ಛೆ ಛೆ ಅದಕ್ಕಲ್ಲ ಸಾರ್ ನಾ ಹೇಳಿದ್ದು?"
" ನಿನ್ನೆ ನೀವು ಮನೆಗೆ ಹೋಗುವಾಗ ನಾಲ್ಕೂ ಐವತ್ತಾಗಿತ್ತು, ಅಂದರೆ ನೀವು ಹತ್ತು ನಿಮಿಷ ಮೊದಲು ಮನೆಗೆ ಹೋದ ಹಾಗೆ ಆಯ್ತಲ್ಲ?"
" ಆದ್ರೆ ನಾನು ಬೆಳಿಗ್ಗೆ ಹತ್ತು ನಿಮಿಷ ಮೊದಲು ಬಂದಿದ್ದೆನಲ್ಲ"
" ಅಂದರೆ" ಕಲ್ಲೂರಾಮ್ ಈಗ ನಿಜವಾಗಿಯೂ ಗಲಿಬಿಲಿಗೊಂಡಂತೆ ಕಂಡಿತು.
" ಸಾರ್ ನಾನು ನೋಡಿದ್ದೆ ಸಾರ್ ನೀವು ಆಫೀಸಿನ  ಗಡಿಯಾರಾನ ಹತ್ತು ನಿಮಿಷ ಮುಂದೆ ಇಟ್ಟದ್ದು,
ಅದಕ್ಕೆ ಸಾಯಂಕಾಲ ಹತ್ತು ನಿಮಿಷ ಬೇಗ ಹೋದೆನಷ್ಟೆ, ಯಾಕೆ ಸಾರ್ ಹಾಗೆ ಮಾಡಿದಿರಿ?
" ನಾನು ಅವರ ಉತ್ತರಕ್ಕಾಗಿ ಕಾಯದೇ ನನ್ನ ರೂಮಿಗೆ ಹೋದೆ, ನನಗೆ ಗೊತ್ತು, ತನ್ನ ಈ ಪ್ರಯೋಗ ಫಲಪ್ರದವಾಗಿಲ್ಲ
ಅಂತ ಗೊತ್ತಾದ ಮೇಲೆ ಬೇರೆ ಏನಾದರೂ ಯೋಚಿಸಲು ತೊಡಗಿರುತ್ತಾನೆ ಅಂತ.
ನನಗೆ ಕಲ್ಲೂರಾಮ್ ಬಹಳ ಇಷ್ಟದ ಹೆಸರು, ಅದಕ್ಕೆ ಬಾಸ್ ನ ಹೆಸರು ಏನೇ ಆಗಿರಲಿ ನಾನು ಕಲ್ಲೂರಾಮ್ ಅಂತೆಲೇ ಕರೆಯೋದು,
ಈಗ ನೀವು ಫ್ಯಾಂಟಮ್ ಕಥೆಯಲ್ಲಿ ನೋಡಿಲ್ವಾ?
ಅದರಲ್ಲಿ ಎಷ್ಟೇ ಜನರೇಷನ್ ಆದರೂ ಫ್ಯಾಂಟಮ್ ಹಾಗೇ ಇರುತ್ತಾನಲ್ಲ.
ಹಾಗೆ ನನ್ನ ಎಷ್ಟು ಆಫೀಸು  ಬದಲಾದರೂ , ಊರು ಬದಲಾದರೂ ,
ಬಾಸು ಬದಲಾದರೂ ಹೆಸರು ಇದೇ ಇರುತ್ತೆ.
ಈ ಬಾಸುಗಳಿದ್ದರಲ್ಲಾ ಅವರು ತಮ್ಮ ಕೆಲಸ ಮಾಡಿಸಿಕೊಳ್ಳುವುದರಲ್ಲಿ ನಿಸ್ಸೀಮರು.
ಅಥವಾ ಅದಕ್ಕೇ ಅವರು ಬಾಸ್ ಆಗಿರ್ತಾರೋ ತಿಳಿಯದು.ಅವರು ಆ ಕೆಲ್ಸಕ್ಕೆ ಎಷ್ಟು ಫಿಟ್  ಅಗ್ತಾರೋ ತಿಳೀದು,
( ಇದನ್ನೇ ಒಬ್ಬರಿಗೆ ಹೇಳಿದಾಗ, ಅದು ನಿಮಗೆ ಗೊತ್ತಿದ್ದರೆ ನೀವು ಆ ಸ್ಥಾನದಲ್ಲಿ ಇರುತ್ತಿದ್ದಿರಿ ಅಂದರು)
ಏನಾದ್ರೂ ನನಗೆ ಬಾಸ್ ಆಗಲು ಇಷ್ಟವಿಲ್ಲ, ಬಿಡಿ. ಇಲ್ಲಿ ನಾನು ಆಫೀಸಿನ  ಬಾಸ್ ನ ಅನೇಕ ಉಪಾಯಗಳನ್ನೂ ನನ್ನ ಗುರು ತಿರುಮಂತ್ರಗಳನ್ನೂ ಕೊಟ್ಟಿದ್ದೇನೆ,
ಆದರೆ ಇದನ್ನು ಉಪಯೋಗಿಸುವುದೋ,ಸುಮ್ಮನೇ ನಕ್ಕು ಬಿಡುವುದೋ ನಿಮಗೇ ಬಿಟ್ಟದ್ದು, ಯಾಕೆಂದರೆ ಇದಕ್ಕೆ ಕಾಪಿ ರೈಟ್ ಇಲ್ಲ,
ಇದೇ ಉಪಾಯ ನಿಮಗೆ ಸಕ್ಸಸ್ ಅಗುತ್ತೆಂಬ ಭರವಸೆ... ನೋಡಿ.. ಆಮೇಲೆ ನನ್ನನ್ನು ಬೈಯ್ಯ ಬೇಡಿ. ದೇಶ ಕಾಲಗನುಗುಣವಾಗಿ ಬಾಸೂ ಅವರವರ ಬುದ್ದಿವಂತಿಕೆಯ ಸ್ತರಗಳೂ ಬದಲಾಗುತ್ತಿರುತ್ತವೆ ಹಾಗೂ ಉಪಾಯಗಳೂ ಮತ್ತು ಅದರ ಫಲಿತಾಂಶಗಳೂ.
ಒಮ್ಮೆ ಹೀಗಾಯ್ತು,ನನ್ನ ಬಾಸ್ ಕಲ್ಲೂರಾಮ್ ನನ್ನ ಕರೆದು,

"ರಾವ್ ಅವರೇ ನನಗೊಂದು ಇಮಿಡಿಯಟ್ ಆಗಿ ಗ್ರೀಟಿಂಗ್ಸ್ ಕಾರ್ಡ್ ಡಿಸೈನ್ ಬೇಕು ಆಫೀಸಿನ ಪರವಾಗಿ" ಎಂದರು.
ನಾನು ಎರಡು ದಿನ ಮುತುವರ್ಜಿ ವಹಿಸಿ ನಮ್ಮ ಇತ್ತೀಚೆಗಿನ ಸುಂದರ ಕಟ್ಟೋಣಗಳ ಫೋಟೋ ಹಾಕಿ ಸ್ವತಹಾ ನಾಲ್ಕು ಡಿಸೈನ್ ಮಾಡಿ ಬಾಸ್ ಗೆ ಕೊಟ್ಟೆ.
"ಗುಡ್ ಗುಡ್ ತುಂಬ ಚೆನ್ನಾಗಿ ಮಾಡಿದಿರಿ, ಬೇರೆಯವರಿಗೆ ತೋರಿಸೋದು ಬೇಡ ಇದು ಸೀಕ್ರೆಟ್ ಹಾರ್ಡ್ ಮತ್ತು ಸೋಫ್ಟ್  ಕಾಪಿ ನನಗೇ ಕೊಡಿ"
ಎಂದ ಬಾಸು ಎಲ್ಲವನ್ನೂ ತೆಗೆದುಕೊಂಡಿತು.
ಆದರೆ ಒಂದು ವಾರದ ಮೇಲೆ ತಿಳಿದದ್ದು ಕಲ್ಲೂರಾಮ್ ಅದನ್ನು ತಾನೇ ಮಾಡಿದೆ ಅಂತ ಹೇಳಿ ಕ್ರೆಡಿಟ್ ಎಲ್ಲಾ ತಾನೇ ತೆಗೆದುಕೊಂಡಿದ್ದ.
ಇನ್ನೊಂದು ಸಾರಿ ಪ್ರೊಜೆಕ್ಟ್ ವರ್ಕೊಂದನ್ನು ಸಹಾ ಹೀಗೇ ಮಾಡಿ ತಾನೇ ದೊಡ್ಡವರೆದುರು ಶಹಬಾಷೀ ಗಿಟ್ಟಿಸಿಕೊಂಡಿದ್ದರು.
ಇದರಲ್ಲಿ ನನಗೆ ದಕ್ಕಿದ್ದು ಪ್ರೋಜೆಕ್ಟ್ ನ ಹೆಸರಲ್ಲಿ ಹದಿನೈದು ದಿನಗಳ ರಜೆಯಷ್ಟೇ. ಇನ್ನೊಂದ್ಸಲ ಆಫೀಸಿನ ಎಕ್ಸಿಕ್ಯೂಟಿವ್ ಎಲ್ಲರೂ ಯಾವುದೋ ಸೈಟಿನ ಸಮಸ್ಯೆ ಬಗೆ ಹರಿಸಲುಹೋಗಿದ್ದೆವು.
ನಮ್ಮೆಲ್ಲರ ಬಾಸ್ ಕಲ್ಲೂರಾಮ್ ಆದರೂ ಆ ಗುಂಪಿನಲ್ಲಿ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿ ಟೋಪಿಯೂ ಇಟ್ಟುಕೊಂಡಿರೋದ್ರಿಂದ ಎದ್ದು ಕಾಣುತ್ತಿದ್ದೆ.

ಹಳ್ಳಿಯವರೆಲ್ಲರೂ ನನ್ನನ್ನೇ ಮುತ್ತಿಕೊಂಡರು. ಲೋಕಲ್ ಭಾಷೆ ನನ ಗೆ ಸರಿಯಾಗಿ ಬರುತ್ತಿರುವುದೂ ನನ್ನ ಬಾಸ್ ಗೆ ಸರಿಯಾಗಿ ಅರ್ಥ ಆಗದಿರುವುದೂ ಇದಕ್ಕೆ ಇಂಬು ಕೊಟ್ಟಿತು, ಸಮಸ್ಯೆ ಬಗೆ ಹರಿದು ನಾವೆಲ್ಲರೂ ಆಫೀಸಿಗೆ ಬಂದ ಕೆಲವು ಸಮಯದವರೆಗೆ ಬಾಸ್ ನ ಮನಸ್ಸಿನಲ್ಲಿ ಕುಟುಕುತ್ತಿತ್ತು. ತಡೆಯಲಾರದೇ ಕೇಳಿಯೇ ಬಿಟ್ಟರು.
ಕಲ್ಲೂರಾಮ್: ರಾವ್ ಅವರೇ ಯಾಕೆ ಊರವರೆಲ್ಲರೂ ನಿಮಗೇ ಜಾಸ್ತಿ ಗೊಉರವ ಕೊಟ್ಟರು?
ನಾನು : ಹಾಗೇನಿಲ್ಲ ಸಾರ್,ನಿಮ್ಮ ಹಾಗೆ ನಾನೂ ಅವರನ್ನೆಲ್ಲ ನೋಡುವುದು ಇದೇ ಮೊದಲಲ್ವಾ, ಅಲ್ಲದೇ ಇಲ್ಲಿಗೆ ನಾನು ಹೊಸಬ ಬೇರೆ.
ಕಲ್ಲೂರಾಮ್: ನಿಮ್ಮ ಡ್ರೆಸ್ ನೋಡಿ ನೀವೇ ಬಾಸ್ ಎಂದು ಕೊಂಡರೋ ಹೇಗೆ?
ನಾನು: ( ಮನದಲ್ಲೇ ಅಲ್ಲವೇ ಮತ್ತೆ ಅಂದುಕೊಂಡೆನಾದರೂ) ಇರಲಿಕ್ಕಿಲ್ಲ ಸಾರ್ ನಿಮ್ಮ ಡ್ರೆಸ್ ನನ್ನದಕ್ಕಿಂತ ಬೆಲೆಬಾಳುವಂತಹದ್ದೇ ಅಲ್ಲವಾ ಸಾರ್ ನನ್ನ ಈಮಾತಿನಿಂದ ಕಲ್ಲೂರಾಮ್ ಪ್ರಸನ್ನರಾದಂತೆ ಕಂಡು ಬಂತು ಆದರೂ...
ಕಲ್ಲೂರಾಮ್: ರಾವ್ ಅವರೇ ಇನ್ನೊಮ್ಮೆ ಹೋಗಬೇಕಾದಲ್ಲಿ ನೀವು ನನ್ನಲ್ಲಿ ಕೇಳಿ, ಡ್ರೆಸ್ ಕೋಡ್ ನಾನು ಸೆಲೆಕ್ಟ್ ಮಾಡ್ತೇನೆ, ನಿಮ್ಮ ಅವಶ್ಯಕಥೆಯಿದ್ದರೆ ಮಾತ್ರ ಕರೆದು ಕೊಂಡು ಹೋಗ್ತೇನೆ,ನೀವು ಆಫೀಸಿನ ಕೆಲ್ಸನೋಡಿಕೊಂಡರೆ ಸಾಕು.
ನಾನು : ಸಾರ್ ಮತ್ತೆ ಪ್ರೊಜೆಕ್ಟ್ ರಿಪೋರ್ಟ್ ಸಿದ್ಧಪಡಿಸಬೇಕಾದಲ್ಲಿ ಸೈಟ್ಗೆ ಹೋಗಲೇ ಬೇಕಲ್ಲಾ?
ಕಲ್ಲೂರಾಮ್:ಅದೆಲ್ಲಾ ನಾನು ನೋಡಿಕೊಳ್ತೇನೆ.
ನನ್ನ ಬಾಸ್ ನ ಮನದಿಂಗಿತ ಅರ್ಥವಾಯ್ತು. ಇಷ್ಟರವರೆಗೆ ಎಲ್ಲಾ ಪ್ರೊಜೆಕ್ಟಗಳಲ್ಲೂ ನನ್ನನ್ನು ಸೇರಿಸಿಕೊಳ್ಳುತ್ತಿದ್ದ ಕಲ್ಲೂರಾಮ್ ಈಸಾರಿ ನನ್ನನ್ನು ಸೇರಿಸಿಕೊಳ್ಳಲೇ ಇಲ್ಲ. ನನಗೆ ಒಪ್ಪದೇ ವಿಧಿಯಿರಲಿಲ್ಲವಲ್ಲ. ಅಂತೂ ಪ್ರೊಜೆcಟ್ ರೆಪೋರ್ಟ್ ಸಿದ್ಧಗೊಂಡಿತ್ತು, ಕಲ್ಲೂರಾಮ್ ರಿಂದ ಬಹಳ ಶ್ರಮವಹಿಸಿ, ಆದರೆ ದೊಡ್ಡ ಬಾಸ್ ಗೆ ತೋರಿಸುವಾಗ ಮಾತ್ರ ಎಡವಟ್ಟಾಯ್ತು.
ನಮ್ಮ ಈ ಪ್ರೊಜೆಕ್ಟ್ ಬರುವ ಜಾಗದಲ್ಲಿ, ನೆಲದಡಿಯಿಂದ ಮೊದಲಿಂದಲೇ ಹೈ ಟೆನ್ಷನ್ ಕೇಬಲ್ ಹಾದು ಹೋಗುತ್ತಿದ್ದು, ಅದನ್ನು  ಬದಿಗೆ ಸರಿಸುವದಾಗಲೀ, ತೆಗೆಯಲಾಗಲೀ ಸಾಧ್ಯವಿಲ್ಲವಾಗಿತ್ತು.
ಈ ಕೇಬಲ್ ಗಳಿಗೆ ಸಾಕಷ್ಟು ಸುರಕ್ಷೆ ಒದಗಿಸಿಯೇ  ನಾವು ನಮ್ಮ ಕೆಲಸ ಮಾಡಬೇಕಾಗಿತ್ತು.ಕಲ್ಲೂರಾಮ ಇದರ ಪ್ಲಾನ್ ಏನೋ ಸರಿಯಾಗಿಯೇ ಮಾಡಿದ್ದರು,ಈ ಕೇಬಲ್ಲಿನ ಸುರಕ್ಷೆಗಾಗಿ ಆರ್ ಸಿ ಸಿ ಹ್ಯೂಮ್ ಪೈಪಗಳನ್ನು ಅಳವಡಿಸಲು ಸೂಚನೆ ನೀಡಿದ್ದರು, ಇದರಿಂದ ಮೇಲಿನ ಪೇವ್ ಮೆಂಟ್ ಗೇನೂ ಧಕ್ಕೆ ಬರಲ್ಲ,ಕೇಬಲ್ಲೂ ಸೇಫಾ ಗೇ ಇರತ್ತೆ ಅಂತ. ಮೊದಲು ನನ್ನನ್ನು ಈ ಪ್ರೊಜೆಕ್ಟ್ ಗೆ ಸೇರಿಸಿಕೊಂಡಿರಲಿಲ್ಲವಲ್ಲ.
ತೋರಿಸುತ್ತಿದ್ದಾಗ ದೊಡ್ಡ ಸಾಹೇಬರು ಕೇಳಿದರು
" ಮಿ ಕಲ್ಲೂರಾಮ್ ಈ ಕೇಬಲ್ಲುಗಳು ಮೊದಲೇ ನೆಲದಡಿಯಲ್ಲಿ ಹಾಕಿರುವಾಗ ನೀವು ಅವುಗಳನ್ನು ಈ ನಿಮ್ಮ ಪೈಪಿನೊಳಕ್ಕೆ ಹೇಗೆ ತೂರಿಸುತ್ತೀರಿ?"
ಬಿತ್ತು ಬಾಂಬ್!!!
ಕಲ್ಲೂರಾಮ ಇದನ್ನು ಈ ದಿಸೆಯಲ್ಲಿ ಪ್ಲಾನ್ ಮಾಡುವಾಗ ಯೋಚಿಸಿರಲಿಲ್ಲ.ಮೈಲಾನುಗಟ್ಟಲೆ ಹರಡಿರುವ ಕೇಬಲ್ಲನ್ನು ಹೊರತೆಗೆದು ಈ ಪೈಪಿನೊಳಗೆ ತೂರಿಸಲು ಈಗ ಸಾಧ್ಯವಿಲ್ಲವಲ್ಲ.ಇನ್ನು ಹೇಗೆ ನಡೆದೀತು ಕಾರ್ಯ? ಅವರು ಕಕ್ಕಾಬಿಕ್ಕಿಯಾಗಿ ನಿರುತ್ತರರಾದರು.ಅವರು ಉತ್ತರಿಸದಿದ್ದುದನ್ನು ಕಂಡು
" ಯಾರ್ರೀ ಮಾಡಿರೋದು ಈ ಪ್ರೋಜೆಕ್ಟ್? ನೀವೇ ತಾನೇ? ಎಂದು ಜೋರಾಗಿ ಕೇಳಿದಾಗ ಇವರು
"ಅಲ್ಲ ಸಾರ್, ರಾವ್ ಅವರೇ ಮಾಡಿದ್ದು"ಎಂದು ಬಿಟ್ಟರು.
ಸರಿ ನನಗೆ ಕರೆ ಬಂತು.
ನಾನು ಬಂದ ಕೂಡಲೇ ದೊಡ್ಡ ಬಾಸ್ ಕೂಲಾಗಿ ನನ್ನ ಕೇಳಿದರು " ರಾವ್ ಅವರೇ ಇದರಲ್ಲಿ ಆರ್ ಸಿ ಸಿ ಪೈಪ್ ಅಳವಡಿಸಲು ಸೂಚನೆ ನೀಡಿದ್ದಿರಲ್ಲಾ? ಮೊದಲೇ ನೆಲದಡಿಯಲ್ಲಿ ಇದ್ದ ಈ ಕೇಬಲ್ಲುಗಳನ್ನು ಪೈಪಿನೊಳಕ್ಕೆ ಈಗ ಹೇಗೆ ತೂರಿಸುವಿರಿ?".
ನಾನು ನಿರೀಕ್ಷಿಸದೇ ಬಂದ ಈ ಪ್ರಶ್ನೆಗೆ ಆ ಕ್ಷಣಕ್ಕೆ ನನ್ನಲ್ಲಿರಲಿಲ್ಲ, ಅವರೇ ಪುನಃ ಕೇಳಿದರು
"ನೀವೇ ತಾನೇ ಪ್ರೊಜೆಕ್ಟ್ ಸಿದ್ಧ ಪಡಿಸಿದವರು?" ನಾನು ಕಲ್ಲೂರಾಮ್ ಮುಖ ನೋಡಿದೆ,
ಅಲ್ಲಿ , ವಿಚಲಿತೆಯಿತ್ತು,ದೈನ್ಯತೆಯಿತ್ತು,ಅಳುಕಿತ್ತು,
"ಹೌದು  ಸಾರ್ "ಎಂದೆ ಧೈರ್ಯದಿಂದ ಮುಂದುವರೆಸಿದೆ " ಸ್ವಲ್ಪ ಇರಿ ಸಾರ್ ನನಗೆ ಯೋಚಿಸಲು ಸ್ವಲ್ಪ ಸಮಯ ಕೊಡಿ, ನನ್ನ ಮನಸ್ಸೆಲ್ಲ ಬೇರೆ ಪ್ರೊಜೆಕ್ಟನಲ್ಲಿದೆ"
"ಸರಿ ತಗೊಳ್ಳಿ ಐದು ನಿಮಿಷ, ಟೀ ಬ್ರೇಕ್" ಎಂದರು.
ಕಲ್ಲೂರಾಮ ರಿಗೆ ನನ್ನಲ್ಲಿ ಭರವಸೆಯಿತ್ತು, ಇಂತಹ ಪರಿಸ್ಥಿತಿಯನ್ನು ಹೇಗಾದರೂ ಬಗೆಹರಿಸುವೆ ಅಂತ. ಟೀ ಮುಗಿಯಿತು.ಎಲ್ಲರೂ ಬಂದ ಮೇಲೆ ನಾನೆಂದೆ" ಸಾರ್ ಇದು ಸಣ್ಣ ಪ್ರಿಂಟ್ ಮಿಸ್ಟೇಕ್ ಅಷ್ಟೇ, ಅಲ್ಲಿ ಪೂರ್ತಿ ರೌಂಡ್ ಪೈಪೆ ಅಲ್ಲ ಸಾರ್ ಅರ್ಧ ರೌಂಡು  ಪೈಪು (ಪೈಪನ್ನು ಉದ್ದಕ್ಕೆ ಸರಿಯಾಗಿ ಅರ್ಧ ಮಾಡಿದರೆ) ಅಂತ ಆಗಬೇಕಿತ್ತು" ಎಂದೆ.
"ಅಂದರೆ ..." ಸಾಹೇಬರಿಗೆ ಇನ್ನೂ ಸಂಶಯ "ಸಾರ್ ಕೇಬಲ  ಇದ್ದ ಜಾಗ ಅಗೆದು  ಕೆಳಗಡೆ ಕಾಂಕ್ರೀಟ್ ಹಾಕಿ ಅದರ ಮೇಳೆ ಈ ಅರ್ಧ  ಪೈಪುಗಳನ್ನು ಲೇ ಮಾಡಬೇಕು ಸಾರ್, ಈ ಪೈಪುಗಳಲ್ಲಿ ಕೇಬಲ್ಲುಗಳನ್ನು ಇಟ್ಟು ಪುನಃ ಇನ್ನೊಂದು ಅರ್ಧ ಪೈಪು ಅದರ ಮೇಲೆ  ಮುಚ್ಚಿದಂತೆ ಇಡಬೇಕು ಸಾರ್, ಮೇಲಿನ ಮಣ್ಣಿನ ಮತ್ತು ಪೇವ್ ಮೆಂಟನ ಭಾರ ಈ ಪೈಪು ತಡೆದು ಕೊಳ್ತದೆ ಸಾರ್" ಎಂದೆ ಮಧ್ಯ ಬಾಯಿ ಹಾಕಿ ಕಲ್ಲೂರಾಮ್
"ಅಲ್ಲ ರಾವ್ ಅವರೇ , ಇದರ ಬದಲು ಚಾನಲ್ ಮಾಡಿದ್ದರೆ? ಸರಿ ಹೋಗುತ್ತಿತ್ತಲ್ಲ? "
ಅಂದರೆ ಇದರ ಅರ್ಥ ನೋಡಿ, ತಾವೇ ಎಲ್ಲಾ ಮಾಡಿ ಈಗ ಅರ್ಥವಾಗಲಿಲ್ಲ ಎಂದರೆ?
ಅದಕ್ಕೂ ನನ್ನಲ್ಲಿ ತಿರುಮಂತ್ರವಿತ್ತು.
" ಇಲ್ಲ ಸಾರ್ ಚನಲ್ ನಲ್ಲಿ ಎರಡು ಕೊರತೆಗಳಿವೆ ಉರುಟು ಪೈಪಿಗೆ ಹೋಲಿಸಿದರೆ ಅದು ಕಡಿಮೆ ಬಲವುಳ್ಳದ್ದು, ಇನ್ನೊಂದು ಈ ಪ್ರೊಜೆಕ್ಟ್ ನಲ್ಲಿ ಸಮಯ ಬಹು ಮುಖ್ಯ ಸಾರ್, ಪೈಪಾದರೆ ಬೇಗ ಅಳವಡಿಸಬಹುದು, ಅಲ್ಲದೇ ಕಳೆದ ಪ್ರೊಜೆಕ್ಟ್ ನಲ್ಲಿ ಉಳಿದ ಪೈಪುಗಳನ್ನು ಇಲ್ಲಿ ಉಪಯೋಗಿಸಿದರೆ ನಮಗೆ ಸಾಕಷ್ಟು ಲಾಭವಿದೆ" ದೊಡ್ಡ ಸಾಹೇಬರು ಎಷ್ಟು ಸಂತಸ ಪಟ್ಟರೆಂದರೆ ಈ ಪ್ರೊಜೆಕ್ಟ್ ನನಗೇ ಸಿಕ್ಕಿತು.

ಇನ್ನೊಂದು ಸಾರಿ ಎರಡು ದಿನ ನಾನು ಆಫೀಸಿಗೆ  ಹೋಗಲೇ ಇಲ್ಲ,ಆ ಮೇಲೆ ನಾನು ಮೆಡಿಕಲ್ ಸರ್ಟಿಫಿಕೇಟಿನೊಂದಿಗೆ ಆಫೀಸಿಗೆ ಹಾಜರಾದೆ.
ಕಲ್ಲೂರಾಮ್: ರಾವ್ ನೀವು ರಜೆಯಲ್ಲಿದ್ದುದು ಸರಿ, ಆದರೆ ಹೋಗುವ ಮೊದಲು ನನಗೊಂದು ಮಾತು ಹೇಳಬಹುದಿತ್ತಲ್ಲ?, ಆಫೀಸಿನಲ್ಲಿ ತುಂಬಾನೇ ಕೆಲಸವಿತ್ತಲ್ಲ!
ನಾನು:( ಹೇಳಿದ್ದರೆ ನೀವು ರಜೆ ಕೊಡುತ್ತಿದ್ದುದು ಹೌದಾ )ಹೇಳಿಯೇ ಹೋಗಿದ್ದೆ ಸಾರ್! ಅಲ್ಲದೇ ನನ್ನ ಆರೋಗ್ಯ ಸರಿಯಿರಲಿಲ್ಲ.
ಕಲ್ಲೂರಾಮ್: ಏನಾಗಿತ್ತು ? ಅಂದ ಹಾಗೆ ಯಾರಿಗೆ ಹೇಳಿ ಹೋದಿರಿ ನೀವು?
ನಾನು: ನನಗೆ ತುಂಬಾ ತಲೆ ನೋವು, ಹೊಟ್ಟೆ ನೋವು ಬಂದಿತ್ತು ಸರ್, ಹೇಳಲು ನೀವು ಹತ್ತಿರದಲ್ಲೆಲ್ಲೂ ಕಾಣಲಿಲ್ಲ,
ಅದಕ್ಕೆ ಕನ್ಯಾಲಗೆ ಹೇಳಿ ಹೋಗಿದ್ದೆ ಸಾರ್.
ಕಲ್ಲೂರಾಮ್:ಯಾರ್ರೀ ಕನ್ಯಾಲ್?
ನಿಮ್ಮ ಬಾಸಾ ಆತ?, ನಾನೇನು ಫಾರಿನ್ನಿಗೆ ಹೋಗಿದ್ದೆನಾ? ನಾನು ಬರುವವರೆಗೆ ಕಾಯಬೇಕಿತ್ತು!
ನಾನು: ಆ ದಿನ ನೀವು ಬರುವುದು ಸಂಶಯ  ಅಂತ ಹೇಳಿದ್ದ ಸಾರ್ ಚಂದ್ರೂ, ಯಾಕೆಂದರೆ ಆ ದಿನ ಕ್ರಿಕೆಟ್ ಮ್ಯಾಚ್ ಇತ್ತಲ್ಲ ಸಾರ್.( ಇದು ರಾಮ ಬಾಣ, ಎಂದೂ ತಪ್ಪಿಲ್ಲ)
ಕಲ್ಲೂರಾಮ್: ಸರಿ ಸರಿ ನೀವಿನ್ನ ಹೋಗಿ.
(ಅಷ್ಟರಲ್ಲಿ ಅವರ ಕೈಗೆ ನನ್ನ ಮೆಡಿಕಲ್ ರಿಪೋರ್ಟ್ ಸಿಕ್ಕಿತಂತ ಕಾಣ್ಸತ್ತೆ.) ತಡೀರಿ,  ನಿಲ್ಲಿ ನೀವು ತಲೆ ನೋವು ಅಂದಿದ್ದಿರಿ ಡಾಕ್ಟರ್ ಇದರಲ್ಲಿ ಜ್ವರ ಅಂತ ಬರೆದಿದ್ದರಲ್ಲಾ?.
ನಾನು: ಅದಕ್ಕೆ ನಾನೇನು ಮಾಡಬೇಕು ಸಾರ್.ನಾನು ನನಗಾದದ್ದು ಹೇಳಿದ್ದೆ, ಡಾಕ್ಟರು ನನ್ನ ಚೆಕ್ ಮಾಡಿ, ತಾನೇ ಬರೆದದ್ದು.
ಕಲ್ಲೂರಾಮ್: ಅದು ಹೇಗ್ರೀ ಆಗುತ್ತೆ, ನಿಮಗೇನಾಗಿದೆ ಅಂತ ನಿಮಗೇ ಗೊತ್ತಾಗೊಲ್ಲ ಅಂದ್ರೆ ಹೇಗ್ರೀ?
ನಾನು: ಏನ್ ಮಾತೂಂತ ಆಡ್ತೀರಾ ಸಾರ್, ನಮಗೇ ಎಲ್ಲಾ ಗೊತ್ತಾಗೋದಾದರೆ ಡಾಕ್ಟರ್ ಯಾಕೆ, ಈ ಆಸ್ಪತ್ರೆ,ಎಲ್ಲಾ ಯಾಕೆ ? ಈ ಜಗತ್ತಿನಲ್ಲಿ ಹೀಗೆ ಮಾಡೋದ್ದರಿಂದಲೇ ಐವತ್ತೈದು ಪ್ರತಿಶತ ಮನುಷ್ಯರು ರೋಗಿಗಳಾದ್ದಾರೆ ಸಾರ್ ಗೊತ್ತಾ... (ಇನ್ನು ಕಲ್ಲೂರಾಮ್ ನನ್ನನ್ನು ಇಲ್ಲಿ ನಿಲಗೊಡುವುದಿಲ್ಲವೆಂದು ಗೊತ್ತು ನನಗೆ.)
ಕಲ್ಲೂರಾಮ್: ಸರಿ ಸರಿ ನೀವಿನ್ನು ಹೋಗಿ.


ನಾನೂ ನನ್ನ ಬಾಸೂ 2

"ಯಾಕ್ರೀ ನಿನ್ನೆ ಬೇಗ ಮನೆಗೆ ಹೋದಿರಂತೆ?"
"ಹೌದು ಸಾರ್, ಮನೆಯಲ್ಲಿ ಸ್ವಲ್ಪ ಕೆಲಸವಿತ್ತು,"
"ಹಾಗಿದ್ದಲ್ಲಿ ಹೇಳಿ ಹೋಗಬಹುದಿತ್ತಲ್ಲ?"
"ಹೇಳಿದ್ದೆ ಸಾರ್ , ಕನ್ಯಾಲಗೆ ಹೇಳಿಹೋಗಿದ್ದೆನಲ್ಲ?"
"ಕನ್ಯಾಲ್ ಯಾರ್ರೀ, ಅವನೇನು ನಿಮ್ಮ ಬಾಸಾ?
ಮತ್ತೆ ಇವತ್ತು ಬೆಳಿಗ್ಗೆ ಸಹಾ ತಡವಾಗಿಯೇ ಬಂದ್ರೀ ಆಫೀಸಿಗೆ. ಹೀಗಾದಲ್ಲಿ ನಾನು ಮೇಲಿನವರಿಗೆ ಏನಂತ ಜವಾಬು ಕೊಡಲಿ?"
"ಯಾಕೆ ಸಾರ್ ಆಫೀಸು ಕೆಲ್ಸವೆಲ್ಲ ಮುಗಿಸಿಯೇ ಹೋಗುತ್ತಿದ್ದೆನಲ್ಲ."
"ಆ ವಿಷಯ ಬಿಡಿ, ಆಫೀಸ್ ಸಮಯದಲ್ಲಿ ಆಫೀಸಿನಲ್ಲಿಯೇ ಇರಬೇಕು, ಕೆಲ್ಸ ಬಂದಿದೆ ಮನೆಗೆ ಹೋದೆ ಅಂದರೆ..?"
" ಕರೆಕ್ಷನ್ ಸಾರ್! ಕೆಲಸ ಬಂದಿದ್ದಲ್ಲ , ಕೆಲಸ ಇತ್ತು ಎಂದಿದ್ದೆ" " ಸರಿ,
ಸರಿ, ಅದೇ ನೀನು ಹೇಳಿದ್ದೇ ಅಂದರೆ ಏನಯ್ಯಾ ಅರ್ಥ?"
(ಮುಗಿಯಿತು, ಈತ ಏಕವಚನಕ್ಕಿಳಿದ ಅಂದರೆ ಸಿಟ್ನಲ್ಲಿದ್ದಾನೆ ಎಂತಲೇ ಅರ್ಥ  ,ಪ್ರಾಣಿ ಬೆಳಿಗ್ಗೆ ತಿಂಡಿ ತಿಂದು ಬಂದಿಲ್ಲವಾ? ಅಥವಾ ಬೆಳಿಗ್ಗೆ ಎದ್ದು ನಾನು ಯಾರದ್ದಾದರೂ ಕಾಟು ಶನಿಯ ಮುಖ ನೋಡಿರಬಹುದಾ? ನೆನಪಿಗೆ ಬಂತು ಒಹ್ ನನ್ನದೇ ಮುಖ ನೋಡಿದ್ದೆ, ಎದ್ದ ಕೂಡಲೇ ಗಡ್ಡ ತೆಗೆದ ನೆನಪು- ನನ್ನ ಯೋಚನೆಗೆ ನನಗೇ ನಗು ಬಂತು)
"ಯಾಕ್ರೀ ನಗು?  ತಪ್ಪು ಮಾಡೋದಲ್ಲದೇ ನಗು ಬೇರೆ"  ವೃಥಾ ಮುಂದುವರಿಸಿದರೆ ಪ್ರಯೋಜನವೇ ಇಲ್ಲ.
"ಹಾಗೆ ಹೇಳಿದರೆ ಹೇಗೆ ಸರ್, ಮನುಷ್ಯ ಅಂದ ಮೇಲೆ ಏನಾದರೂ ತಲೆ ಬಿಸಿ ಇದ್ದೇ ಇರುತ್ತದೆ,
ಈಗ ನೀವು ಕ್ರಿಕೆಟ್ ಆಟ್ ಇದ್ದರೆ ಬೇಗ ಹೋಗ್ತೀರಲ್ಲ ಮನೆಗೆ, ಆದಿನ ಬಾಸ್ ಬಂದಾಗ ನಾನೇನ್ ಅದನ್ನ ಹೇಳಿದ್ನಾ?
ಇಲ್ಲ ಅಲ್ಲವಾ ಹಾಗೇ ನೀವೂ ಏನಾದರೂ ಸಬೂಬು ಹೇಳಿದರಾಯ್ತು, ಏನಂತೀರಾ?"
"ಯಾವಾಗ? ಬಾಸ ಬಂದಿದ್ದರಾ?" "
ಅದೇ ಸಾರ್ ಮೊನ್ನೆ ಮೊನ್ನೆ ನಮ್ಮದು ಪಾಕಿಸ್ತಾನದ್ದೂ ಏಕ ದಿನ ಕ್ರಿಕೆಟ್ ಇತ್ತಲ್ಲಾ, ಆದಿನ!!
ಬಾಸ್ ಬೇರೆ ಬಂದಿದ್ದರು"- ಆಗದ ದಿನವನ್ನು ನೆನಪಿಸುತ್ತಾ ಹೇಳಿದೆ "ಬಾಸ್ ನ ಬಾಸ್ ಬೇರೆ ಬಂದಿದ್ದರು ಸಾರ್, ನಮ್ಮ ಇದಿರಿನ ಕಾಂಪೌಂಡ್ ಕಲರಿಂಗ್ ಮಾಡಿಸ್ತಾ ಇದ್ದ್ವಲ್ಲ, ಆ ದಿನ ಚಂದ್ರೂ ಬೇರೆ ಇರಲಿಲ್ಲ, ಅವನನ್ನು ನಿಮ್ಮ ಮೇಡಮ್ ಮಾರ್ಕೇಟಿಂಗ್ ಗೆ ಕರ್ಕೊಂಡ್ ಹೋಗಿದ್ರಲ್ಲ, ಕ್ಯೂರಿಂಗ್ ಯಾಕ್ರೀ ಮಾಡಿಸ್ಲಿಲ್ಲ ಅಂತ ಬೇರೆ ಕೂಗಾಡಿದ್ರು, ನಾನು ಇಲ್ಲ ಸಾರ್ ಫ್ರಾಗ್ ಯೂರಿನ್ ಕ್ಯೂರಿಂಗ್ ಮಾಡಿಸ್ತಾಇದ್ದೀವಿ ಅಂದೆ ,ಬಾಕಿ ಆಫೀಸಿನ ಕೆಲಸದ ಬಗ್ಗೆ ಕೆಲವು ಇನ್ಸ್ಟ್ರಕ್ಷನ್ ಕೊಟ್ಟು ಹೋದ್ರು ಸಾರ್"
"ವೆರಿ ಗುಡ್ ವೆರಿ ಗುಡ್ ರಾವ್ ಅವ್ರೆ ಒಳ್ಳೆಯ ಕೆಲಸ ಮಾಡಿದ್ರಿ, ಅಂದ ಹಾಗೆ ಅದೇನದು.. ಫ್ರಾಗ್ ಕ್ಯೂರಿಂಗಾ?
ಆವಿಷಯ ನನಗೆ ಗೊತ್ತಿರಲಿಲ್ಲ, ಅದೇನದು ಸ್ವಲ್ಪ ಬಿಡಿಸಿ ಹೇಳಿ.."
ನಕ್ಕೆ ನಾನು "ಅವರೂ ಅದನ್ನೇ ಕೇಳಿದರು ಸರ್!
( ಅವರಿಗೆ ಹೇಳುವವರೆಗೆ ನನಗೇ ಗೊತ್ತಿರಲಿಲ್ಲ, ಅಲ್ಲ ಇದ್ದ ಒಬ್ಬ ಚಂದ್ರುವನ್ನ ಇವರು ಸ್ವಕಾರ್ಯಕ್ಕೆ ಉಪಯೋಗಿಸಿಕೊಂಡರು,
ಇನ್ನು ಅವರ ಬಾಸ್ ಬಂದು ನೀರು ಯಾಕೆ ಹಾಕಲಿಲ್ಲ ಎಂದರೆ, ಈ ಕೆಲಸ ನಾವು ಸ್ಟಾಫ್ ಮಾಡಬೇಕಾ ಹೇಗೆ?
ಏನಾದರೊಂದು ಹೇಳಲೇ ಬೇಕಲ್ಲ! ಅದಕ್ಕೆ ಸಮಯಕ್ಕೊಂದು .... ಹೇಳಿದ್ದೆ, ಅಷ್ಟೇ)
ಅಂದರೆ... ನೀವು ಕಪ್ಪೆ ಹಿಡಿಯಲು ಎಂದಾದರೂ ಹೋಗಿದ್ದ್ರಾ ಸರ್?"   ರಾಆಆಆವ್ ಅವರೇ ಏನಂತ ಹೇಳ್ತೀರಾ ! ಅಲ್ಲ ನಾನು ಹೇಳಿ ಕೇಳಿ ಸಸ್ಯಾಹಾರಿ ನನ್ಯಾಕೆ ಕಪ್ಪೆ ಹಿಡೀಯಲು ಹೋಗಲಿ? ಎಲ್ಲಿಂದ ಎಲ್ಲಿಗೆ ಹೋಗ್ತೀರಾ
ವಿಷಯಕ್ಕೆ ಬನ್ನಿ" ಮಾತನಾಡುವಾಗ ಇದಿರಿದ್ದವರ ಹಾಗೆಯೇ ತಾನೂ ಇದ್ದೇನೆ ಅಂತ ಹೇಳಿ ಎಲ್ಲರನ್ನು ಚೆನ್ನಾಗಿ ಕರವಶ ಮಾಡಿ ಕೊಳ್ಳೋ ಕಲೆ
ಈ ಬಾಸ್ ವಂಶಜರಿಗೆ ಸರಿಯಾಗಿ ತಿಳಿದಿರುತ್ತೆ. ಅಲ್ಲ ಈತ ವಾರ ವಾರ ಯಾವ ಕೆಂಟುಕಿಯಿಂದ ಏನೇನು ತರಿಸ್ತಾರೆ ಅಂತ ಚಂದ್ರುವಿನಿಂದ ಎಲ್ಲ ವಿಷಯಗಳನ್ನೂ ನಾನೂ ಕನ್ಯಾಲೂ ತಿಳಿದುಕೊಂಡಿರೋದು ಇವನಿಗೆ ಹೇಗೆ ತಿಳಿಯುತ್ತೆ?
ನಾನು ಅಪ್ಪಟ ಸಸ್ಯಾಹಾರಿಯಾದುದರಿಂದ ತಾನೂ ಹಾಗೆಯೇ ಅಂತ ಹೇಳುತ್ತಿರುತ್ತಾನೆ.
"ಹಾಗೇನಿಲ್ಲ ಸಾರ್, ಚಿಕ್ಕವರಿರುವಾಗ ನಾವೆಲ್ಲ ಕಪ್ಪೆಯನ್ನು ಓಡಿಸುತ್ತಿದ್ದೆವು ಮಳೆಗಾಲ ಬಂತೆಂದರೆ ಕಪ್ಪೆಯ ವಟ ವಟ ಕೇಳದವರಿಲ್ಲವಲ್ಲ ಸರ್,
ಆಗೆಲ್ಲ ಹಿಡಿಯಲು ಹೋದಾಗ ಅದನ್ನು ನಾವು ಹಿಡಿದೆವು ಅನ್ನುವಾಗ ಅದು ಮೂತ್ರ ಮಾಡಿ ಜಂಪ್ ಮಾಡಿ ತಪ್ಪಿಸಿಕೊಂಡು ಓಡಿ ಬಿಡುತ್ತಲ್ಲ,
ನಾನು ಅಸಹ್ಯವೆನಿಸಿ ಅದನ್ನು ಬಿಟ್ಟು ಓಡುತ್ತಿದ್ದೆವು, ಹೀಗೆ ಇಲ್ಲೊಂದಿಷ್ಟು ಅಲ್ಲೊಂದಿಷ್ಟು ನೀರು ಚಿಮುಕಿಸೋದನ್ನ ಫ್ರಾಗ್ ಯೂರಿನ್ ಕ್ಯೂರಿಂಗ್ ಎನ್ನುತ್ತಾರೆ ಸರ್, ಅದನ್ನೇ ನಾನು ಹೇಳಿದ್ದು, ಅವರು ನಕ್ಕು ಬಿಟ್ಟರು ಸರ್!"
"ಸರಿ ಸರಿ, ಮಾತಾಡಿದ್ದು ಸಾಕು ಇನ್ನು ಸ್ವಲ್ಪ ಕೆಲಸಾನೂ ಮಾಡೋಣ...".
ಇನ್ನೇನಿಲ್ಲ ಹೋಗಿ ಅಂತ ಅರ್ಥ.
ನಾನು ನನ್ನ ಕ್ಯಾಬಿನ್ನಿಗೆ ವಾಪಸಾದೆ.
ಬಾಸ್ ತನ್ನ ಕೆಂಪು ಹೊಂಡಾ ಸಿಟಿಯಲ್ಲಿ ಹೋಗುವುದು ಕಂಡಿತು, ನನ್ನನ್ನು ಅವ ನೋಡಿರಬಹುದಾ?
ನೋಡಿದರೆ ನೋಡಲಿ, ಒಂದು ಐಡಿಯಾವೂ ಬಂತು, ಈ ರಸ್ತೆಯಲ್ಲಿ ಗಾಡಿಗಳ ಲೈನ್ ನೋಡಿದರೆ ಮುಕ್ಕಾಲು ಘಂಟೆಯಲ್ಲಿ ಅವರು ಆಫೀಸು ತಲುಪಲು ಸಾಧ್ಯವೇ ಇಲ್ಲ.
ದಕ್ಕೆ ನಾನು ನನ್ನ ನೀಲಿಯನ್ನ ಫುಟ್  ಪಾಥ್ ಮೇಲೇ ಓಡಿಸಿ ಎಡಕ್ಕೆ ತಿರುಗಿಸಿ ಗಲ್ಲಿ ಹಿಡಿದೆ. ಇದರಲ್ಲಿ ಹೋದರೆ ನನಗೆ ಬೇಕಾಗುವುದು ಬರೇ ಹತ್ತು ನಿಮಿಷಗಳಷ್ಟೇ.
ಬಾಸು ತಲುಪುವುದರೊಳಗಾಗಿ ನನ್ನ ರಿಪೋರ್ಟ್ ಕೂಡಾ ಮುಗಿಸಿ ಬಿಡಬಹುದು.
ಎಂದಿನಂತೆ ಇವತ್ತು ಕೂಡಾ ಬೆಳಿಗ್ಗೆ ಏಳುವುದು ತಡವಾಗಿ ಆಫೀಸಿಗೆ ತಡವಾಯ್ತು. ಏನುಮಾಡುವುದು, ಅಭ್ಯಾಸ ಬಲ


ನಾನೂ ನನ್ನ ಬಾಸೂ 3

                                       

 ಆಫೀಸಿನ ಕಂಪ್ಲೈಂಟ್ ಸೆಕ್ಷನ್ ನ ದೂರವಾಣಿ ಗುಣುಗುಣಿಸಿತು.
ಈ ಸಾರಿ ಎತ್ತಿದ್ದು ಕನ್ಯಾಲ್ " ಹಲ್ಲೋ ಯಾರು ಬೇಕಾಗಿತ್ತು..?"  ಆ ಕಡೆಯಿಂದಲೂ ಪಶ್ನೆಯೇ ಅಂತ ಕಾಣ್ಸುತ್ತೆ.
".........................................."
ಕನ್ಯಾಲ್ ಗೆ  ರೇಗಿತು " ರೀ ಯಾರ್ರೀ ಮಾತಾಡೋದು? ಸರಿಯಾಗಿ ಹೇಳ್ಬಾರ್ದಾ..? ಯಾರ್ಬೇಕಾಗಿತ್ತು ನಿಮ್ಗೆ?"
".........................................."
ಕನ್ಯಾಲ್ ಗೆ ರೇಗಿತು " ರೀ ತಲೆ ಎಲ್ಲಾ  ಹರಟಬೇಡಿ ಯಾರು ಅಂತಹೇಳಿ"
".........................................."
" ಎಲಾ ಇವ್ನಾ, ನಂಗೇ ಏಮಾರ್ಸ್ತಾ ಇದ್ದೀಯಾ..? ನಂಗೇ ಹೆಸರಿಟ್ಟಿಲ್ವಾ ಅಂತ  ಕೇಳ್ತೀಯಾ?ಇರು ನಿಂಗೆ....!!" ಅವನು ಇನ್ನೂ ಜೋರಾಗುವಷ್ಟರಲ್ಲಿ ಮೋಹನ್ಲಾಲ್
 " ಏಯ್ ನಮ್ ಸಾಹೇಬ್ರ ಮಾವ ಬರ್ತಾರಂತಲ್ಲಾ ಇವತ್ತು, ಯಾವಾಗಲಾದ್ರೂ ಅವರ ಫೋನ್ ಬರತ್ತೆ ಅಂದದ್ದು ಮರೆತೆಯಾ ಹೇಗೆ? ಇದೂ ಅವರದ್ದೇನಾದ್ರೂ ಆಗಿದ್ದರೆ...."
ಕನ್ಯಾಲ್ ಮೆತ್ತಗಾದ " ಹೇಳಿಸಾರ್ , ನಾನು ಕನ್ಯಾಲ್ ಮಾತನಾಡ್ತಾ ಇದ್ದೆನೆ, ಸಾಹೇಬರು ಬರೋದು ಇನ್ನೂ ತಡವಾಗುತ್ತೆ, ಹೇಳಿ ಎನಾಗ್ಬೇಕಿತ್ತು?"
".........................................."
ಕನ್ಯಾಲ್ ಮೋಹನ್ ಲಾಲ್ ನನ್ನು ಕರೆದ " ಏನೋ ಹೇಳ್ತಾ ಇದಾರೆ ನೋಡಿ"

ಇದನ್ನೆಲ್ಲ ಕೇಳುತ್ತಿದ್ದ ನಾನೇ ತಕೊಂಡೆ

"ಹೇಳಿ,  ಏನಿದೆ ಕಂಪ್ಲೈಂಟೂ"
" ಫೋನ್ ನಂಬರ್ ಬಂದಿಲ್ಲ" ದನಿ
"ಅದು ನಮ್ಮ ಸೆಕ್ಷನ್ ಅಲ್ಲ, ಇನ್ನು ಏನಿದೆ ಹೇಳಿ, ನೀರಿಂದೇನಾದರೂ ಸಮಸ್ಯೆ ಇದೆಯಾ?"
"ಹೌದು, ನೀರೇ ಬರ್ತಾ ಇಲ್ಲ ನಳ್ಳೀಲಿ" ದನಿ
"ಸರಿ ಮನೆ ನಂಬರ್ ಹೇಳಿ"
"ನಂಬರ್ ಇನ್ನೂ ಬಂದಿಲ್ಲವಲ್ಲ" ಎಂದಿತು ದನಿ
"ನಾನು ಮನೆ ನಂಬರ್ ಕೇಳ್ತಾ ಇರೋದು"
 " ಮನೆ ನಂಬರ್ ನಂಗೆಗೊತ್ತಿಲ್ಲ, ಅಳಿಯನಿಗೆ ಗೊತ್ತು" ದನಿ
ಹಾಗಾದ್ರೆ ಮೊಬೈಲ್ ನಂಬ್ರ  ಹೇಳಿ" ದನಿ  ಈಗ ಗಾಬರಿಯಾಯ್ತು "  ಮೊಬಾಯಿಲ್ ಕೂಡಾ ಅಳಿಯನ ಹತ್ತಿರವೇ ಇದೆ "
"ಸರಿ ಹಾಗಿದ್ದರೆ ನೀವು ಒಂದ್ ಕೆಲ್ಸಾ ಮಾಡಿ, ನೀವು ಇಲ್ಲಿಗೇ ಬಂದು ಕಂಪ್ಲೈಂಟ್ ಕೊಡಿ"
ದನಿ "ನಾನು ಹ್ಯಾಗೆ ಅಲ್ಲಿಗೆ ಬರ್ಲೀ ಸಾರ್"
ಈಗ ಗಾಬರಿಯಾಗೋ ಸರದಿ ನನ್ನದಾಯ್ತು." ಹ್ಯಾಗಾದ್ರೂ ಬನ್ನಿ, ಯಾವ್ದಾದ್ರೂ ಗಾಡಿಯಲ್ಲಿ  ಬನ್ನಿ"
"ನಾನು ಹೊಸಬ, ನಾನೆಲ್ಲಿಂದ ತರಲಿ ಗಾಡಿ" ದನಿ
"ಮತ್ತೆ ಹ್ಯಾಗ್ರೀ ಬರ್ತೀರಾ...?
"ನಾನ್ ಗಾಡೀಲಿ ಬರಲ್ಲ ಬಸ್ಸಲ್ಲೇ ಬರ್ತೀನಿ ಆಗದಾ? " ಈ ಉತ್ತರ ಕೇಳಿ ನನಗೆ ಈಗ ಸಂಶಯ ಬಂತು
" ಹೇಳಿ ನಿಮ್ಮ ಹೆಸರು"
ದನಿ " ಯಾವ ಹೆಸರು ಅಂತ ಹೇಳಲಿ? ಮನೆಯಲ್ಲಿ ಕರೆಯೋ ಹೆಸರು ಕುಕ್ಕು, ಮಕ್ಕಳೆಲ್ಲಾ ಪ್ರೀತಿಯಿಂದ ಧೋಂಡೂ ಮಾಮ ಅಂತಾರೆ, ಅಮ್ಮ  ಫೊಕ್ಕೂ ಅಂತಾಳೆ, ರಾಶಿ ಪ್ರಕಾರ ಮಾದೇವ."
"ಇನ್ನೇನೂ ಹೆಸರಿಲ್ವಾ" ನಗುತ್ತಾ ನಾನೆಂದೆ
ದನಿ " ಇದೆ, ಶಾಲೆಯಲ್ಲಿ ನಂಗೆ ಕಾಕೂ ಅಂತಿದ್ದರು"
"ಸರಿ ಯಾವುದಾದರೊಂದು, ಸರೀನಾ"
ದನಿ " ಅದು ಹೇಗ್ರೀ ಆಗತ್ತೆ, ನೀವು ಬರೆದ ಹೆಸರು ನಂಗೆ ಗೊತ್ತಾಗಬೇಕಲ್ವಾ"
"ಅದೂ ಸರೀನೇ ಕಾಕೂ ಅಂತ ಬರೀತೇನೆ ಆಯ್ತಾ..?
" ಹಾಗಾದ್ರೆ ಯಾವಾಗ ಬರತ್ತೆ ಫೋನೂ"   ಕಾಕೂ ಪ್ರಶ್ನೆ

" ಫೋನ್ ಗೆ ಅಲ್ಲ ನೀರಿಗೆ, ಆದರೆ ನೀವು ನಿಮ್ಮ ಅಳಿಯನಿಗೆ ಹೇಳಿ ಆಯ್ತಾ"
"ಆಂವ ಬರೋದು ಇನ್ನು ಸಾಯಂಕಾಲವೇ ಆಯ್ತು"  ಧೋಂಡೂ ಮಾಮ
" ಮನೆ ನಂಬ್ರ ಹೇಳದೇ ನೀರಿಗೆ ಏನೂ ಮಾಡಕ್ಲೂ ಸಾಧ್ಯಾನೇ ಇಲ್ಲ ಬಿಡಿ" ನಾನೆಂದೆ
ಅಯ್ಯೋ ಬಿಡಿ, ಸರ್ಕಾರದ ಕಯ್ಯಲ್ಲಾಗದ್ದು ನಿಮ್ ಕಯ್ಯಲ್ಲೇನಾಗತ್ತೆ , ಈ ಹಳ್ಳಿ ಕೊಂಪೇಲಿ ನೀರ್ ಯಾವಾಗ ಬರತ್ತೆ ಬಿಡಿ" ಎಂದ ಮಾದೇವ ಅಲ್ಲ ಪೊಕ್ಕು, ಅಲ್ಲ ಕುಕ್ಕು , ಯಾವ್ದೋ ಒಂದು, ಹೋ ಅಂದ್ರೆ ಇದು ರಾಂಗ್ ನಂಬರ್ ಕೇಸೂ..
" ಮತ್ಯಾಕ್ರೀ ಮಾಡಿದಿರಿ ನಮ್ ಆಫೀಸಿಗೆ" ಕೇಳಿದೆ
"ನಾನೆಲ್ಲಿ ನಿಮ್ಗ್ ಮಾಡ್ದೆ..? ನಾನೇ ನೋ ನನ್ನ ಅಳಿಯನ ನಂಬರ್ ಗೆ ಮಾಡ್ದೆ, ನೀವೇನೋ... ಅವ್ನ ಸಾಹೇಬ್ರೇನೋ ಅಂದ್ಕೊಂಡ್ ಮಾತಾಡ್ದೆ" ಕಾಕೂ ಎಂದ
" ಸರಿ ಅಲ್ಲ ಅಂತ ಗೊತ್ತಾದ ಮೇಲೆ ಇಡಬಾರದಾ ನನ್ನ ಟೈಮ್ ಹಾಳ್ ಮಾಡ್ದ್ರಲ್ಲಾ ಛೇ!!" ನಾನು ದಬಾಯಿಸಿದೆ
"ಅರೆ, ನಿಮ್ಮದಲ್ಲದ ಫೋನ್ ನ ನೀವ್ಯಾಕ್ರೀ ಎತ್ತೋಕ್ ಹೋದ್ರೀ..? ತಪ್ ಮಾಡ್ಕೊಂಡು ನನ್ನೇ ದಬಾಯಿಸ್ತಾ ಇದ್ದೀರಲ್ಲ, ಹೋಗಲಿ ಬಿಡಿ ನನ್ನ ಅಳಿಯನಿಗೆ ಫೋನ್ ಕೊಡಿ"  ಬಡ ಪೆಟ್ಟಿಗೆ ಬಿಡೋ ಅಸಾಮಿಯಲ್ಲ ಅಂತ ಕಾಣ್ಸತ್ತೆ ಈ ಫೊಕ್ಕೂ
ಮೋಹನ ಲಾಲ್ ನ ಕರೆದು ಅತನ ಕೈಗಿಟ್ಟು " ನೋಡಪ್ಪಾ ಅವ್ರ ಅಳಿಯನಿಗೆ ಕೊಡಬೇಕಂತೆ ಫೋನ್ ನ"
" ಇಡ್ರೀ ಕೆಳಗೆ ಫೋನ್ ನಾ, ಇಲ್ಯಾರೂ ನಿಮ್ಮ್ ಅಳೀಯ  ಇಲ್ಲ" ಅಂತ ದಬಾಯಿಸಿ ಇಟ್ಟೇ ಬಿಟ್ಟ. ಮತ್ತೆ ನನ್ನ ಕಡೆ ತಿರುಗಿ
"ನೋಡ್ದ್ರಾ ಸರ್, ತಪ್ ನಂಬರ್ ಗೆ ಫೋನ್ ಮಾಡಿ ನಂಗೇ ದಬಾಯಿಸ್ತಾ ಇದ್ದಾನೆ, ರಾಂಗ್ ನಂಬ್ರ  ಯಾಕೆ ಎತ್ತಿದ್ದೂ ಅಂತ, ಎಂತೆಂತಾ  ರೀತಿಯ ಮನುಷ್ಯರು ಇದ್ದಾರೆ ಈ ಪ್ರಪಂಚದಲ್ಲಿ, ಅಲ್ಲ ಫೋನ್ ಎತ್ತದೇ ಹೆಂಗೆ ಗೊತ್ತಾಗತ್ತೆ, ನಂಬರ್ ಸರಿಯಾದದ್ದು ಹೌದಾ ಅಲ್ಲವಾ ಅಂತ" ಎಂದ
" ಇತ್ತಿಚೆಗೆ ಮುಖ  ನೋಡಿ ಮಾತನಾಡುವ ಫೋನ್ ಕೂಡಾ  ಬಂದಿದೆಯಂತೆ, ಆದರೆ ಸದ್ಯ ಅದು ನಮ್ಮಲ್ಲಿಗೆ ಬರೋದ್ ಯಾವಾಗಲೋ" ಎಂದೆ ನಾನು
ಇನ್ನೊಮ್ಮೆ ಫೋನ್ ಮಾತನಾಡಿತು, ನಾನೇ ತೆಗೆದುಕೊಂಡೆ" ಸಾರ್ ಎರಡು ದಿನಗಳಿಂದ ನೀರು ಸರಿಯಾಗಿ ಬರ್ತಾ ಇಲ್ಲ, ತುಂಬಾನೇ ಕಷ್ಟ ಆಗ್ತಾ ಇದೆ ಸಾರ್ ಎರಡಕ್ಕೂ ತತ್ವಾರಾನೇ...." ಮೋಹನ್ ಲಾಲ್ ಕೈಗಿತ್ತು ಕಂಪ್ಲೈಂಟ್ ಬರೆದು ಕೊಳ್ಳಲು ಹೇಳಿದೆ.

************      

                                                ******************                                                                ************                 
           "ರೀ ನಿನ್ನೆ ನೀವು ಮೂರೂವರೆಗೇ ಮನೆಗೆ ಹೋದಿರಂತೆ?ಯಾಕೆ..?" ಬಾಸ್ ಕಲ್ಲೂರಾಮ್ ರೇಗುತ್ತಿದ್ದಾನೆ ಅನ್ನಿಸಿತು" ಇಲ್ಲ ಸಾರ್ ಯಾರ್ ಹೇಳಿದ್ದು ನಿಮ್ಗೆ? ನಾನು ಆಫೀಸಲ್ಲೇ ಇದ್ದೆನಲ್ಲ! ನಾನು ನಿನ್ನೆ ಮನೆಗೆ ತಲುಪುವಾಗ ಎಂಟೂವರೆ ಸಾರ್, ನನ್ನ ಮಗನ ಪರಿಕ್ಷೆ...."
ಕಲ್ಲೂರಾಮ್ ಇನ್ನೂ ಜೋರಾದ  " ಯಾಕ್ರೀ ಸುಳ್ಳು ಹೇಳ್ತೀರಾ? ನೀವೂ ಕನ್ಯಾಲ್ ನಿನ್ನೆ ಮೂರೂವರೆಗೆ ಸ್ಕೂಟರಿನಲ್ಲಿ ಒಟ್ಟಿಗೇ ಹೋದಿರಲ್ಲಾ, ನಾನೇನ್ ನೋಡಿಲ್ಲ  ಅಂದ್ಕೊಂಡ್ರ್ಯಾ? 
ಈಗ ನಾನೂ ಜೋರಾದೆ " ಅಂದ್ರೆ ಏನ್ಸಾರ್ ನಿಮ್ಮ ಮಾತಿನ  ಅರ್ಥ? ಆಫಿಸಿನಿಂದ ಹೊರಟೆ ಎಂದರೆ ಮನೆಗೇನಾ? ನಾನೂ ಕನ್ಯಾಲ್ ಹೋದದ್ದು ಪಂಪ್ ಹೌಸಿಗೆ ಸಾರ್? ಜೋಗ ಸರಿಯಾಗಿ ಕೆಲಸ ಮಾಡ್ತಾನಾ ಅಂತ ನೋಡಲು ಹೋಗಿದ್ದೆವು" 
ಆಫೀಸರ್ ಮೆತ್ತಗಾದ
" ಹೌದೇನ್ರೀ... ಮತ್ತೆ ...ಜೋಗ ಸರಿಯಾಗ ಕೆಲ್ಸ ಮಾಡ್ತಾ ಇದ್ದನಾ..? ...............ಸರಿ ಸರಿ ನೀವಿನ್ನು ಹೊರಡಿ"  ನಾವಿಬ್ಬರೂ ಹೊರ ಬಂದೆವು.                       
ಈ ಸಾರಿಯ ಕರೆ ರುದ್ರನಿಗೆ. ಅವರು ನಿಧಾನವಾಗಿ ಆಡುತ್ತಿದ್ದ ಮಾತು ನಮ್ಮ ರೂಮಿನ ವರೆಗೂ ಬರುತ್ತಿತ್ತು,
"ಯಾಕಯ್ಯಾ, ಸುಳ್ಳು ಸುಳ್ಳೇ ಹೇಳ್ತೀಯಾ?"
ಕಲ್ಲೂರಾಮ್ ಗೆ ಸಿಟ್ಟು ಬಂದರೆ ಇದಿರಿನವನಿಗೆ ಏಕವಚನದ ಗೌರವ
." ಏ...ಏನಾಯ್ತು ಸರ್?" ರುದ್ರ." ಮತ್ತೆ ಅವರಿಬ್ಬರೂ ಮೂರೂವರೆಗೆ ಮನೆಗೆ ಹೋದರು ಅಂದೆಯಲ್ಲಾ, ಅವರು ಹೋದದ್ದು ಪಂಪ್ ಹೌಸಿಗಂತೆ"
"ಏನೋ ಸಾರ್ , ಹೊರಡುವಾಗ ಮನೆಗೆ ಹೋಗೋಣ ಅಂತಾನೇ ಮಾತಾಡ್ತಾ ಇದ್ರು ಸಾರ್,   ನೋಡಿದ್ರಾ ಸರ್ ಅವರು ಸುಮ್ಮ್ ಸುಮ್ನೆ ಸುಳ್ಳು ಹೇಳ್ತಾರೆ ಸಾರ್.....ಎಂತಾ ಸುಳ್ಳರು............."
ತಡೆದ ಮಧ್ಯದಲ್ಲೇ ಕಲ್ಲೂರಾಮ್
" ಇನ್ಮೇಲೆ ಇಂತಹ ಕಿಡಿಗೇಡಿತನದ  ಕೆಲ್ಸ ಮ್ಮಾಡ್ಬೇಡ ಹೋಗೂ.." ರುದ್ರ ಮೆತ್ತಗಾಗಿ ವಾಪಾಸು ರೂಮಿಗೆ ಬಂದ.
ನಾನು ಕನ್ಯಾಲ್ ಒಬ್ಬರನ್ನೊಬ್ಬರು ನೋಡಿ ನಕ್ಕೆವು
ಇದೆಷ್ಟು ಹೊತ್ತೋ....


ನಾನೂ ನನ್ನ ಬಾಸೂ ೪ 

 

ತಲೆಯ ಮೇಲಿನ ಬಂಡೆ


        

                                              ಬೆಳಿಗ್ಗೆ ಎಂದಿನಂತೆ ಸೂರ್ಯತಡವಾಗಿ ಬಾನಿಗೇರಿದ್ದರಿಂದ ನಾನು ಕಣ್ಣು ತೆರೆಯುವುದು ತಡವಾಯ್ತು. ಅದರಿಂದಾಗಿ ನನ್ನೆಲ್ಲಾ ದೈನಂದಿನ ಕೆಲಸಗಳೂ ತಡವಾಗಿ ನಾನು ಆಫೀಸಿಗೆ ಬರೇ ಒಂದೂವರೆ ಗಂಟೆ ತಡವಾಗಿಯೇ ಹೊರಟೆ. ಎರಡನೇ ಕಿಲೋಮೀಟರಿನಲ್ಲಿ ನೀಲಿ ಕೈಕೊಟ್ಟಳು. ಜಾಫರನ  ಹತ್ತಿರ ಹೋದರೆ ಕಳೆದ ಸಾರಿಯಂತೆ ಇಡೀ ಸೌರಾಷ್ಟ್ರ ದೇಶದ ಕಥೆಯೆಲ್ಲಾ ಹೇಳಿ ತಲೆ ತಿಂತಾನೆ, ನಾನೇ ರಿಪೇರಿ ಮಾಡಲು  ಕುಳಿತೆ.. ಪ್ಲಗ್ ಕ್ಲೀನ್ ಮಾಡಿ ಕರೆಂಟ್  ಚೆಕ್ ಮಾಡಿದೆ ಬರ್ತಾ ಇತ್ತು. ಪೆಟ್ರೋಲ್ ನೋಡಿದೆ ಥುತ್!!  ರಿಸರ್ವಿಗೆ ಬಂದಾಗಿತ್ತು. ಆಫೀಸಿಗೆ ತಲುಪುವಾಗ ಪುನಹ ಅರ್ಧ ಗಂಟೆ ತಡ. ಆಫೀಸ್ ಗೇಟಲ್ಲೇ ಪುನಃ ನಿಂತಳು ನೀಲಿ, ಈ ಸಾರಿ ಹಾಳಾಗಿ ಅಲ್ಲ, ಬದಲು ಕಾಲೋನಿಯ ಎಲ್ಲರೂ ಗೇಟ್ ನ ಮುಂಬಾಗದಲ್ಲೇ ನೆರೆದಿದ್ದಾರೆ ಹೆಂಗಸರು, ಮಕ್ಕಳು ಎಲ್ಲರೂ ಘೇರಾವ್!!!. ನನ್ನ ಬಾಸ್  ಮತ್ತು ರುದ್ರ ಕೂಡಾ ಅಲ್ಲಿಯೇ ಇದ್ದರು. ಗೇಟ್ ಮುಚ್ಚಲಾಗಿತ್ತು. ಅಂದರೆ ಯಾರೂ ಒಳ ಹೋಗದಂತೆ ತಡೆಯುತ್ತಿದ್ದಾರಾ? ಬಾಸ್ ಮುಖ ಕೆಂಪು ಕೆಂಪಾಗಿತ್ತು. ನನ್ನ ಕಡೆ ಕಲ್ಲೂರಾಮ್ ನೋಡಿದ ನೋಟದಲ್ಲಿ ಶಿವನಾಗಿದ್ದರೆ ಓಹ್ ನಾನೂ ನೀಲಿ ಇಬ್ಬರೂ ಒಮ್ಮೆಲೇ ಭಸ್ಮವಾದೇವು ಅನ್ನಿಸಿತ್ತು. ದೃಷ್ಟಿ ತಪ್ಪಿಸಿದೆ. ಒಮ್ಮೆಲೇ ಹೊಳೆಯಿತು!! ಆದರೆ ನನ್ನ ಮರೆವಿಗೆ ನನಗೇ ನನ್ನ ಮೇಲೆ ಸಿಟ್ಟು ಬಂತು.

                                          ಮೂರು ದಿನದ ಹಿಂದೆಯಷ್ಟೇ ಗೊತ್ತಾಗಿತ್ತದು, ಯಾರೋ ನನ್ನ  ತಲೆಮೇಲೆ ಕಲ್ಲು ಹೊತ್ತು ಹಾಕುವ ಕೆಲ್ಸ ಮಾಡ್ತಾ ಇದ್ದಾರೆ ಅಂತ. ಅಂದರೆ ಇಡೀ ಕಾಲೋನಿಯಲ್ಲಿ ( ಅಂದರೆ ನಮ್ಮ ಕಂಪೆನಿಯ ಕೆಲಸಗಾರರು, ಆಫೀಸರರು, ಎಲ್ಲಾಸೇರಿ ಇರುವಜಾಗ- ಅಲ್ಲಿಯೇ ) ನೀರಿನ ಟ್ಯಾಂಕ್ ಪಂಪ್ ಹೌಸ್ ಇದ್ದು ಕಾಲೋನಿಗೆ ನೀರು ಸರಬರಾಜು ಮಾಡುವ ಜವಾಬ್ದಾರಿ ನನ್ನದಾಗಿತ್ತು. ಈ ಹಿಂದೆ ಅದು ನನ್ನ ಕಲೀಗ್ ರುದ್ರನ ಕೆಲಸವಾಗಿತ್ತು. ಆದರೆ ಇತ್ತೀಚೆಗಷ್ಟೇ ನನಗೆ ವಹಿಸಿ ಕೊಡಲಾಗಿತ್ತು. ಅದಕ್ಕೆ ಸರಿಯಾಗಿ , ಕ್ಲುಪ್ತ  ಸಮಯಕ್ಕೆ ಸರಿಯಾಗಿ ನೀರು ಬಿಡುವ ವ್ಯಕ್ತಿ ಬಡ್ಕೂ( ಅದು ನಿಜವಾದ ಹೆಸರಲ್ಲ, ಅವನು ಎಲ್ಲರೆದುರಿಗೂ ಏನೇನೋ ಬಡಬಡಿಸ್ತಾ ಇರೋದ್ರಿಂದ - ಅದೂ ಮಧ್ಯ ಜಲ ಒಳಗಿಳಿದಾಗ ಮಾತ್ರ- ಎಲ್ಲರೂ ಆತನಿಗೆ ಆ  ಹೆಸರನ್ನು ಇಟ್ಟಿದ್ದರು). ಅವನಲ್ಲಿನ  ಒಂದೇ ದೋಷವೆಂದರೆ ಮೃಗಜಲ ಅಲ್ಲಲ್ಲ ಮಧ್ಯ ಜಲ ಏರಿಸೋದು. ಸುಮಾರು ೪೦-೫೦ ವರ್ಷದ ಆತ ಆ "ಇದು" ಏರಿಸಿದನೆಂದರೆ ಒಮ್ಮೆಲೇ ಇಪ್ಪತೈದಕ್ಕೆ ಇಳಿದು ಬಿಡುತ್ತಾನೆ. ಈ "ಇಳಿದ" ವಯಸ್ಸಿನಲ್ಲೇ ಆತ ಆ ಇಪ್ಪತೈದು ಮೀಟರ್ ಎತ್ತರದ ನೀರಿನ ಹೌದಿಯನ್ನು ಚಕಚಕನೆ ಏರಿಬಿಡುತ್ತಾನೆ. ಮತ್ತು ಮಾಡಬೇಕಾದ ಕೆಲಸಗಳನ್ನೆಲ್ಲಾ ಚಾಚೂ ತಪ್ಪದೇ ಮಾಡಿಬಿಡುತ್ತಾನೆ. ಆದರೆ ಆ "ಇದು" ಇಲ್ಲದಿದ್ದರೆ ಮಾತ್ರ ನಾಲ್ಕೈದು ಮೆಟ್ಟಲು ಹತ್ತಲೂ ಅವನಿಂದಾಗೋದಿಲ್ಲ. ತನ್ನ ಮಗಳ ಮದುವೆಯ ತಲೆಬಿಸಿಯಲ್ಲಿ ಆತ ರಜೆಯಲ್ಲಿ ಹೋಗಿದ್ದ. ಆ ಸಮಯದಲ್ಲಿ ಇಲ್ಲಿನ  ಕೆಲಸ ವಹಿಸಿಕೊಂಡವ ಜೋಗ. ನನಗೆ ಜೋಗನ ಮೇಲೆ ನಂಬಿಕೆ ಇದೆ. ಆದರೆ ವಾಸ್ತವ ಬೇರೆಯೇ ಇತ್ತು. ನೀರೇ ಬರಲಿಲ್ಲವೋ ಅಥವಾ ಹೌದಿಯ ನೀರೇ ಖಾಲಿಯಾಯ್ತೋ ಗೊತ್ತಿಲ್ಲ. ಬೆಳಿಗ್ಗೆ ಬಿಡಲು ನೀರೇ ಇಲ್ಲ. ನೀರು ಬಾರದೇ ಇರಲು ಸಾಧ್ಯವೇ ಇಲ್ಲ. ಅಂದರೆ ಹ್ಯಾಗೋ ನೀರು ಖಾಲಿಯಾಗಿರಬೇಕು.ಹೀಗಾದದ್ದು ಈ ವಾರದಲ್ಲಿ ಇದು ಮೂರನೆಯ ಬಾರಿ. ಅದಕ್ಕೇ ಈ ಘೆರಾವ್. ಇವತ್ತಿಂದ ರಾತ್ರೆ ನಮ್ಮ ಕಡೆಯ  ಚೌಕಿದಾರ್ ಬಿಡಲೇ ಬೇಕು.
                     

                                                                                       ************  ***********************      ***********
        

                                                 ನಾನು ಆಫೀಸಿನ ಒಳಹೊಗ್ಗುವಾಗ  ಬಾಗಿಲಲ್ಲೇ ಇದ್ದ ಮೂವರೂ ಗಹನವಾಗಿ ಒಂದು ಕಾಗದ ಇದಿರಿಟ್ಟುಕೊಂಡು ಚರ್ಚಿಸುತ್ತಿದ್ದರು. ನಾನು ಬಂದುದನ್ನು ನೋಡಿದ ಮೋಹನ್ ಲಾಲ್ " ಸಾರ್ ಬಂದ್ರಲ್ಲ, ಇವರಿಗೆ ಗೊತ್ತಿರುತ್ತೆ, ಕೇಳೋಣ" ಎಂದ . ಇತ್ತೀಚೆಗೆ ಈತ  ನನ್ನ ಚೇಲಾ  ಅಗ್ತಾ ಇದ್ದಾನೆ." ಸುಮ್ನಿರಯ್ಯಾ, ಇದು ಇವ್ರದ್ದಲ್ಲ, ಇವ್ರಿಗೇನ್ಗೊತ್ತಾಗುತ್ತೆ, ಆ ವೇಲಾಯುಧನ್ ಸಾಹೇಬ್ರದ್ದಿರಬೇಕಿದು" ಎಂದ ಕನ್ಯಾಲ್. ಇವ್ರಿಗೆ ಎಲ್ಲಾ ಭಾಷೇನೂ ಬರುತ್ತೆ ಗೊತ್ತಾ?, ಇವರು ಬೆಂಗಳೂರಿನೋರಲ್ವಾ?" ಅಂದ ಮೋಹನ್ಲಾಲ್.  "ಏಯ್ ಎನೂಂತ ಹೇಳ್ತೀರೋ, ಅಥವಾ ಹಾಗೇ ಬಡಬಡಿಸ್ಕೊಂಡು ಕೂತಿರ್ತೀರೋ?" ಜೋರಾಗಿ ಕೇಳಿದೆ ನಾನು." ಸಾರ್ ನಿನ್ನೆ ಶೇಟಿ ಕಸ ಗುಡಿಸುತ್ತಿರುವಾಗ ಈ ಕಾಗ್ದ ಸಿಕ್ತು, ನಿನ್ನೆ ನೀವು ರೂಮೆಲ್ಲಾ  ಹುಡುಕಾಡ್ತಾ ಇದ್ರಲ್ಲಾ, ನಿಮ್ದೇ ಇರಬೇಕು" ಎಂದ ನನ್ನ ಚೇಲ. "ಕೊಡ್ರೋ ಇಲ್ಲಿ "ಎಂದೆ ಡೌಲಿನಿಂದ.
                          
                                                ನಿನ್ನೆ ನನ್ನ ಮೆಡಿಕಲ್ ಬಿಲ್ಲು ಎಲ್ಲೋ ಕಳೆದು ಕೊಂಡು ಬಿಟ್ಟಿದ್ದೆ. ಅದನ್ನ ಹುಡುಕದೆ ಇದ್ದರೆ ಅನ್ಯಾಯವಾಗಿ ನನ್ನ ನೂರೈವತ್ತು ರೂಪಾಯ್ ಹಾಳಾಗುತ್ತೆ. ಆ ಕ್ಯಾಷರ್ರೂ ಬಿಲ್ಲ್ ಇಲ್ದೇ ಎನೂ ಮಾಡಲ್ಲ. ಅದೂ ಹದಿನೈದು ರುಪಾಯಿ ಕೊಟ್ಟು ಡಾಕ್ಟರ್ ಪ್ರದೀಪರಿಂದ ಬರೆಸ್ಕೊಂಡು ಬಂದಿರೋ ಬಿಲ್ಲು. ಹಾಗೇ ಹೇಗೆ ಬಿಡ್ಲೀ ಅಂತ ರೂಮೆಲ್ಲಾ ಹುಡುಕಿದ್ದೆ, ಸಿಕ್ಕಿರ್ಲಿಲ್ಲ. ಈಗ ಅದೇ ಸಿಕ್ತೇನೋ ಅಂತ ಆಸೆಯಿಂದ  ನೋಡ್ದೆ. "ಥುತ್ ಅಲ್ಲ ಕಣ್ರೋ, ಇದು ಕಂಪೌಂಡರ್ ಕಟ್ಟಿ ಕೊಟ್ಟ್ ಮಾತ್ರೇ ಚೀಟಿ ಕಣ್ರೋ, ನೀವೆಲ್ಲಾ ಕ್ರಿಕೇಟ್ ಮಂಡಳೀಲಿ ಇರಬೇಕಾಗಿತ್ತು, ಬೇಕಾಗಿರೋದ್ಯಾವ್ದೂ ನಿಮಗೆ ಸಿಕ್ಕಲ್ಲ, ಅಂತ ಹೇಳ್ಬೇಕು ಅಂದ್ಕಂಡೆ, ಆದರೆ ಹೇಳಲಿಲ್ಲ".( ಇದು  ಸದನ ಅಲ್ವಲ್ಲ!!!) ಅಷ್ಟರಲ್ಲಿ ಒಳಗಿಂದ ಬುಲಾವ್ ಬಂತು.       

                                               ಶೇಟಿ ಬಂದು ಹೇಳ್ದ" ಸಾಹೇಬ್ರು ಕರೀತಾ ಅವ್ರೆ" " ಏನಯ್ಯಾ ವಿಷ್ಯ?" ಕೇಳ್ದೆ. ಇವನೂ ಭುವನೇಶ್ವರ ದೇವಸ್ಥಾನದ ಅರ್ಚಕರ ಸಾಲೇ, ಕಾಸ್ಬಿದ್ರೆ ಮಾತ್ರ ತೀರ್ಥ, ಇಲ್ದೇ ಇದ್ದರೆ ಏನಿಲ್ಲ. ಕಿಸೆಯಿಂದ  ಎರಡ್ರುಪಾಯಿ ತೆಗೆದು ನೇರ ಶೇಟಿ ಕಿಸೇಲ್ ಹಾಕ್ದೆ. ಉದುರ್ತು ತೀರ್ಥ!" ಸಾಹೇಬ್ರು ಬಿಸೀಲವ್ರೆ( ಅಂದ್ರೆ ಸಿಟ್ನಲ್ಲಿ), ಸಾರ್ ರುದ್ರಪ್ಪ್ನೋರೂ ಅಲ್ಲೇ ಅವ್ರೆ ಸಾರ್"
ಆಯ್ತು, ನನಗೆ ಗೊತ್ತಾಗೋಯ್ತು. ಏನೋ ಹಿಕ್ಮತ್ತು ನಡೆಸಿರಬೇಕು ರುದ್ರ ಮತ್ತೆ. ಪ್ರಾಯಶಃ ಏನೋ ಗ್ರಹಚಾರ ಕಾದಿದೆ ನನಗೆ, ಅದಕ್ಕೆ ಮೊದಲೇ ಅಣಿಯಾಗಬೇಕಲ್ಲ. ಕೈಯಲ್ಲಿ ಡೈರಿ ಹಿಡಿದು ಸೀದಾ ಒಳನುಗ್ಗಿದೆ. ಮುಖದಲ್ಲಿ ನಗು ಬರಿಸಿ
" ಗುಡ್ ಮಾರ್ನಿಂಗ್ ಸಾರ್"  

                                                ಬಾಸ್ ನಗೋದು ಬಿಡಿ, ನನಗೆ ಕೂತ್ಕೊಳ್ಳಲು ಖುರ್ಚೀನೂ ತೋರಿಸ್ಲಿಲ್ಲ , ಈಗಂತೂ ಅಸಾಮೀ ಚಾರ್ಲೀ ಚಾಪ್ಲಿನ್ ನ ಮೋಡರ್ನ್ ಟೈಮ್ಸ್ ತಂದು ತೋರ್ಸಿದ್ರೂ ನಗಲ್ಲ, ಅಷ್ಟೂ ಸೀರಿಯಸ್. ಪ್ರಾಯಶಃವಿಷಯ ಸೀರಿಯಸ್ಸೇ ಇರಬೇಕು.  ಅರೇ ಏನಾಯ್ತೂ,..? ನಿನ್ನೆಯ ವರೆಗೆ ಸರಿಯಾಗಿಯೇ ಇತ್ತಲ್ಲಾ ಪ್ರಾಣಿ,  ಅದರ ಮನೆಯವರೆಗೆ ಡ್ರಾಪ್ ಕೂಡಾ  ಮಾಡಿದ್ದೆ ಸಂಜೆ, ಮನೆಯ ಒಳಹೊಕ್ಕುವಾಗ
( ಕಾಫೀಗಂತೂ ಕರೆಯೋದಿರಲಿ, ಒಳಕರೆದು ನೀರೂ ತೋರ್ಸಲ್ಲ, ಅದು ಬೇರೆ ವಿಷಯ !!!)    "ರಾವ್ ಅವರೇ,  ಈಸಾರಿ ನಿಮಗೆ ಪ್ರಮೋಷನ್ ಗ್ಯಾರಂಟೀ" ಅಂತ ಕೂಡಾ ಹೇಳಿತ್ತಲ್ಲ..?
ಬೆಳಿಗ್ಗೆ ಆಫೀಸಿಗೆ ಬರೋದು ಸ್ವಲ್ಪ ತಡವಾಯ್ತು, ಅಷ್ಟರಲ್ಲೇ ಪಾರ್ಲಿಮೆಂಟೇ ಬದಲಾಯ್ತಾ ಹೇಗೆ?


                                             "ಯಾಕ್ಸಾರ್ ಏನಾಯ್ತು? ದಾರಿಯಲ್ಲಿ ಸ್ಕೂಟರ್ ಸ್ವಲ್ಪ ಕೈಕೊಡ್ತು ಸಾರ್, ಕ್ಲಚ್ ವಾಯರ್ ಕಟ್ಟಾಗಿತ್ತು!! ಸರಿ ಮಾಡ್ಕೊಂಡು ಬರೋದ್ರಲ್ಲಿ ಸ್ವಲ್ಪ ತಡವಾಯ್ತು ಸಾರ್" ಜಾಸ್ತಿಯೇ ಬೇಸರ ತಂದಿದ್ದೆನಾ ಮುಖದಲ್ಲಿ..? ರುದ್ರ ನನ್ನ ಕೈಯ್ಯನ್ನೇ ನೋಡ್ತಾ ಇತ್ತು. ಅದಕ್ಕೆ ಡೌಟಾ ? ನಾನು ಬೆಳಿಗ್ಗೆ ನಡೆದೇ ಬಂದದ್ದು ಗೊತ್ತಾಯ್ತಾ ಹೇಗೆ?


ನಾನೂ ನನ್ನ ಬಾಸೂ 5

ರುದ್ರನ ಕಿತಾಪತಿ


" ಅಲ್ಲರೀ ನಿಮ್ಗೆ ನಿಮ್ಮ ಕೆಲ್ಸದೋರನ್ನೂ ಕಂಟ್ರೋಲ್ ಮಾಡಲೂ ಬರಲ್ಲವಲ್ಲ . ಹೀಗಾ ನೀವು ಎಡ್ಮಿನಿಸ್ಟ್ರೇಷನ್ ಮಾಡೋದು..?"
ಚೆನ್ನಾಯ್ತು, ಭಿನ್ನಮತೀಯರನ್ನು ಕಂಟ್ರೋಲ್ ಮಾಡಲು ಮುಖ್ಯ ಮಂತ್ರಿಗೆ ಹೇಳಿದ ಹಾಗೆ ಆಯ್ತು!!,
ಅಲ್ಲ ಆಫೀಸು ಇರೋದು ಇವ್ರ ಕೈಯಲ್ಲಾ, ನನ್ನ ಕೈಯಲ್ಲಾ?,
ಸುಮ್ನೇ ಇದ್ದೆ, ಈಗ ನಾನೂ ಅವ್ರ ಮಾತಿಗೆ ಉತ್ತರ ಕೊಟ್ಟರೆ ಇದು ಪಾರ್ಲಿಮೆಂಟ್ ಭವನವೋ ಇಲ್ಲಾ ಹುಚ್ಚ್ರಾಸ್ಪತ್ರೇನೋ ಆಗೇ ಬಿಡತ್ತೆ,
ಮೊದಲೆರಡು ಬಾರಿ ಇದೇ ಆಗಿತ್ತು , ನಂಗೆ ಮೊದಲೇ  ನನ್ನದು ಏರೊತ್ತಡದ ಹೃದಯ, ಆಯ್ತು, ನಮ್ಮ ಆಫೀಸೇ ಪಾರ್ಲಿಮೆಂಟ್ ಭವನ ಅಂದರೆ ಪೂರ್ತಿಯಾಗಿ ಅಲ್ಲ  (ಅಂದರೆ ಖುರ್ಚಿ ಮೇಜು ಎತ್ತಾಕಿ ಅಲ್ಲ)......ಹೀಗೆನ್ನುವಾಗ ನನ್ನೊಬ್ಬ ಖಾಸ್ ದೋಸ್ತ್ ನೆನಪಾದ, ಆತ ಅವನ ಭಾಸ್ ನ್ನು ಇಂತಹದ್ದೇ ಪರಿಸ್ತಿತಿಯಲ್ಲಿ " ನೋಡಯ್ಯಾ...... ಜಾಸ್ತಿ ಗಾಂಚಾಲಿ ಮಾಡಿದರೆ ನಿನ್ನ ಇದೇ ಹೊಂಡದಲ್ಲಿ ( ಮಹಲಿನ ಅಡಿಪಾಯಕ್ಕಾಗಿ ತೆಗೆಯುತ್ತಿರುವ ಹೊಂಡ) ಹೂತು ಮಣ್ಣು ಹಾಕಿ ಬಿಡ್ತೇನೆ"
ಅಂತ ಗದರಿಸಿದ್ದನಂತೆ, ಅವನ ಆ ಕೆಂಪು ಕಣ್ಣು ಆರ್ಭಟ ನೋಡಿದ ಅವನ ಬಾಸ್ ಮತ್ತೆಂದೂ ಬಾಲವೇ ಬಿಚ್ಚಲಿಲ್ಲವಂತೆ ಅವನ ಮುಂದಿನ ವರ್ಗಾವಣೆಯ ವರೆಗೆ.
ಆದರೆ ನನಗೆ ಅದೆಲ್ಲಾ ಆಗಲ್ಲ ಬಿಡಿ, ಆದರೂ ನನ್ನ ಅರಚಾಟದ ನಂತರ,
ಅಂದರೆ ನಾನು ಸ್ವಲ್ಪ ನರಮ್ ಆಗಿ ಇರೋವಾಗ ನನ್ನ ಕೋಣೆಗೇ ಬಂದು
" ರಾವ್ ಅವರೇ ನಾನು ನಿಮ್ಮ ಆಫೀಸರ್ರೂ, ನಾನು ಏನೇ ಹೇಳ್ಲಿ, ನೀವು ಆಗಲೇ ಏನೂ ಹೇಳಬೇಡಿ, ಆಫೀಸಲ್ಲಿ ಯಾರೂ ಇಲ್ಲದಿರುವಾಗ( ಅಂದರೆ ನಾನೊಬ್ಬನೇ ಇರಬೇಕಾದ್ರೆ ಏನಿದ್ರೂ ಹೇಳಿ. ನಂಗೆ ಗೊತ್ತು ವಿಷಯ ಇಲ್ದೇ ನೀವು ಏನೂ ಹಾಗೆಲ್ಲಾ ಹೇಳಲ್ಲ ಅಂತ , ಆದ್ರೂ ಇದು ಆಫೀಸಲ್ಲಿನ ನನ್ನ ಮರ್ಯಾದೆ ಪ್ರಶ್ನೆ ಅಂತ  ಅಲವತ್ತುಕೊಂಡ ಮೇಲೆ,
ನಾನೂ ಸುಮ್ನೆ ಇರೋದು ಕಲಿತುಕೊಂಡೆ. ಅದೂ ಸುಮ್ನೇ ಆಗತ್ತಾ...?
ಇದಿರಲ್ಲಿ ಕುಳಿತುಕೊಂಡಿರೋದು ( ಒಂದು.............ತ್ತೆ).... ಏನೋ ಒಂದು ಒದರ್ತಾ ಇರತ್ತೆ ....ಅಂತ ಮನಸ್ಸಲ್ಲೇ ಗ್ರಹಿಸ್ಕೊಂಡೂ, ಗ್ರಹಿಸ್ಕೊಂಡೂ
,...... ಬಿಡಿ..... ಆಮೇಲಾಮೇಲೆ ಅಭ್ಯಾಸ ಆಯ್ತು.

 "ಅಲ್ರೀ ನಾನೂ ಸೀನಿಯರ್ ಸಾಹೇಬ್ರೂ ಚೆಕಿಂಗ್ ಗೆ ಅಂತ ಹೋದ್ರೆ ಅವ್ರೆದ್ರುಗೇ ಅವ ಆ ಪಂಪ್ ಆಪರೇಟರ್ರೂ ನನ್ಮರ್ಯಾದೇನೇ ತೆಗೆದ್ಬಿಡೋದೇನ್ರೀ
( ಇದ್ದರಲ್ವಾ ತೆಗೆಯೋಕೇ..?), ಅಲ್ಲರಿ ದೊಡ್ಡ್ ಸಾಹೇಬ್ರೂ ಸುಮ್ನೇ ಏನಾರೂ ಸಮಸ್ಯೆ ಇದೆಯಾ ಅಂತ ಕೇಳೋದೇ ತಡ, ಆತ ಎಲ್ಲಾ  ಒದರಿ ಬಿಡೋದೇನ್ರೀ? ನೀರೇ ಸರಿಯಾಗಿ ಬರಲ್ಲ ಅಂತೆ,.... ಯಾಕಯ್ಯ್ಯಾ ಮೊದಲೇ ಹೇಳ್ಲಿಲ್ಲ ಅಂದ್ರೆ ಕಳೆದ ಹದಿನೈದು ದಿನದಿಂದ ಇದು ಹೀಗೇನೇ, ಇವ್ರಿಗೆ ಎಲ್ಲಾ ಗೊತ್ತೂ ಅಂತ ನನ್ನ ತೋರ್ಸ್ಬಿಡೋದೇನ್ರೀ?   ಅದೂ ಆ ಭಡವಾ ದೊಡ್ ಸಾಹೇಬ್ರಿಗೇ?
ಎನ್ರೀ ಏನ್ರೀ, ಹೀಗೇ ಏನ್ರೀ ನೀವೂ ನಿಮ್ಮ್ ಆಡಮ್ಮೂ ಅಂತಾ ಸಿಕ್ಕಾ ಪಟ್ಟೆ ನನ್ನ ಬೈದ್ರಲ್ರೀ, ಮೆಮೋ ಅಂತೆ ಚಾರ್ಜ್ ಶೀಟ್ ಅಂತೆ, ಮೊದಲೇ ಅವ್ರಿಗೆ ಬೀಪಿ, ಈಗ  ಸೀ ಎಮ್ ಚೆಕಿಂಗ್ ಬೇರೆ ಇದೆಯಂತೆ.. ನಂಗೆ ಏನ್ಮಾಡೋದೂ ಅಂತ ಗೊತ್ತಾಗ್ತಾ ಇಲ್ವಲ್ರೀ.. ರೀ.. ರೀ..?!?!??!!??!!

  ರುದ್ರನ್ನ ನೋಡಿದ್ರೆ ಕಂಡೂ ಕಾಣದಹಾಗೆ ನಗ್ತಾ ಇದ್ದಾನೆ, ಆ ನಗು ಇನ್ನೊಬ್ಬರ ಆಟಿಕೆಯನ್ನು ಹಾಳು ಮಾಡಿ ಮರೆಯಲ್ಲಿ ನಿಂತು ಖುಷಿ ಪಡೋ  ಮಗುವಿನ ರೀತಿಯಲ್ಲಿತ್ತು. ಇವನದ್ದೇ ಕಿತಾಪತಿ ಅಂತ ಅರ್ಥ ಆಯ್ತು.
ಬೇಸಗೆಯಲ್ಲಿ ನೀರಿನ  ಸಮಸ್ಯೆ ಎಲ್ಲಾ ಕಡೆ ಇದ್ದದ್ದೇ , ಎಲ್ಲರಿಗೂ ಇದು ಗೊತ್ತಿದ್ದದ್ದೇ, ಆದರೂ ಸಾಹೇಬರು ರೌಂಡ್ಗೆ ಅಂತ ಹೋದಾಗ್ಲೇ  ಹೀಗಾದರೆ!!!
ಮುಂದೆ ಸೀಎಮ್ಮು ವಿಸಿಟ್ ನಲ್ಲೂ ಹೀಗೇ ಆದರೆ ಇಡೀ ಡಿಪಾರ್ಟ್ ಮೆಂಟ್ ಹೆಡ್ ಆದ ನಮ್ಮ ದೊಡ್ಡ ಸಾಹೇಬ್ರ ಗತೀ....?????
ನಂಗೂ ನಗು ಬಂತು, ಆದರೆ ನಗೋ ಹಾಗಿಲ್ಲವಲ್ಲ... ಅದೂ ಈಗ..???
 
"ಇಷ್ಟೇನಾ ಸಾರ್..!!!, ನಾನೆಲ್ಲಾ ಸರಿ ಮಾಡ್ತೇನೆ ಬಿಡಿ ಸಾರ್" ಎಂದೆ.
 " ಹ್ಯಾಗ್ರೀ... ಹ್ಯಾಗ್ರೀ.. ಸರಿ ಮಾಡ್ತೀರಾ?
ಕೆಲ್ಸದೋರ್ನೆಲ್ಲಾ ಮೊದ್ಲೇ ಕಲ್ಸೀ ಇಡಬಾರದೇನ್ರೀ"
ಅಸಾಮಿ ಇನ್ನೂ ಕೆಂಪಾಯ್ತು, ಅಲ್ಲಲ್ಲ ಮಾತಿಗ್ ಹೇಳ್ದೆ, ಹೇಳಿಕೇಳಿ ಕಲ್ಲೂರಾಮ್ !! ಸಿಟ್ಟಿಗೆದ್ರೆ, ಇನ್ನೂ ಕಪ್ಪಗಾಗ್ತಾನಲ್ಲ!! ಕೆಂಪಲ್ಲ!!!
 " ನಿಮ್ಗೆ ಮೆಮೋ ಕೊಡ್ತೇನೆ......
ನೀವು ಸರಿಯಾಗಿ ಕೆಲ್ಸ ಮಾಡಲ್ಲ!!!...........................!!!!!!"
ಇನ್ನೂ ಎನೇನೋ ಹೇಳ್ತಾನೇ ಇದ್ರೆ.... ಆತನ ದನಿ ಇನ್ನೂ ಚಿಕ್ಕದಾಯ್ತಾ ಹೋಯ್ತು..
ಯಾಕೆಂದ್ರೆ ನಾನು ಅವನೆದ್ರಿಗೇ ಇರಲಿಲ್ಲ.... ಹೊರಗಡೆ ಬಂದಾಯ್ತು.
ಅಂತೂ ರುದ್ರನ ಖುಷಿ ಅವನ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಕನ್ಯಾಲ್ ಬೇಸರದಲ್ಲಿದ್ದ.
ಏನಾಯ್ತಪಾ.....ಯಾಕೆ ಬೇಸರ?
"ಮನೆಯವರು ಮುನಿಸಿಕೊಂಡಿದ್ದಾರೆ"
"ಯಾಕೆ?"
ಅವರ ತಾಯಿ  ಮನೆಯಲ್ಲೇನೋ ಕಾರ್ಯಕ್ರಮವಿತ್ತಂತೆ, ಕರೆದಿದ್ದಾರೆ, ಮಕ್ಕಳ ಪರೀಕ್ಷೆ ಹತ್ತಿರ ಬಂತಲ್ಲಾ ಅದಕ್ಕೆ ಹೋಗಬೇಡ ಎಂದೆ, ಅದಕ್ಕೇ ಬೇಸರ.ಮಾತಿಲ್ಲ  ಕಥೆಯಿಲ್ಲ, ಮಧ್ಯಾಹ್ನ ಊಟಮಾಡುವಾಗ ವೂ ಅಷ್ಟೇ.ಏನು ಮಾಡಬೇಕಾಂತ ಗೊತ್ತಾಗುತ್ತಿಲ್ಲ"
ಯಾಕೋ  ತಲೆಬಿಸಿ ಮಾಡ್ಕೊಂಡಿದ್ದೀಯಾ, ಸಂಜೆಯ ಒಳಗೆ ಸರಿಮಾಡೋಣ ಬಿಡು, ಬಾ ಪಂಪ್ ಹೌಸಿಗೆ ಹೋಗಿ ಬರೋಣ"
ಏನು ಮಾಡಲೂ ಸಾಧ್ಯವಿಲ್ಲ, ಅವರ  ಸಿಟ್ಟು ನಿನಗೆ ಗೊತ್ತಿಲ್ಲ, ಇನ್ನು ಹತ್ತು ದಿನ ಹೀಗೇ ಅವರು"
ಮೊಮ್ನ್ನೆ ಮೊನ್ನೆಯಷ್ಟೇ ಊರಿಂದ ಬಂದಿದ್ದಾರೆ, ಆದರೂ ನೋಡು ಅಮ್ಮ ಕರೆದರು ಅಂತ...... ಅಲ್ಲ ಈ ಅಮ್ಮಂದಿರಿಗೆಲ್ಲಾ ಏನಾಗುತ್ತೋ ಗೊತ್ತಿಲ್ಲ"
ನಿನ್ನ  ಬಿಸಿ ಗೊತ್ತಾಯ್ತಪ್ಪಾ , ನಾನು ಹೇಳಿದೆನಲ್ಲ ಸಂಜೆಯ ಒಳಗೆ ಅವರ ಮನಸ್ಸು ಸರಿಮಾಡೋ ಜವಾಬ್ದಾರಿ ನಂದು , ಸರೀನಾ..?
ರಿಯಲೀ... ? ಕನ್ಯಾಲ್ ಖುಷ್!!!
ಹೌದು ಸಂಜೆಯ ಒಳಗೆ ಏನಾದರೂ ಮಾಡಲೇ ಬೇಕು.
ನಂಗೇ ಗೊತ್ತಿಲ್ಲ ಏನು ಮಾಡಬೇಕು ಅಂತ .... ಒಂದು ಕಡೆ ಸಾಹೇಬರ ಕಷ್ಟ!!!!,   ಇನ್ನೊಂದೆಡೆ ಸ್ನೇಹಿತನ ನಷ್ಟ!!!!ನಾನೂ ನನ್ನ ಬಾಸೂ 6

ನೇರ ಗುರಿಯ ಬಾಣ


" ಏನಯಾ ಜೋಗಾ ಯಾಕೆ ಹೀಗ್ಮಾಡ್ದೆ...?  ನಮ್ ಸಾಹೇಬ್ರಿಗೇ ಬೈಸಿದ್ಯಂತಲ್ಲಾ, ಅಲ್ಲಯ್ಯಾ ಏನಾದ್ರೂ ತೊಂದರೆಯಿದ್ದರೆ ನಂಗೆ ಹೇಳ್ಬೇಕಾಗಿತ್ತೂ, ಅದನ್ನ ಬಿಟ್ಟೂ ದೊಡ್ಡ ಸಾಹೇಬ್ರಿಗೇ ಸೀದಾ ಹೇಳೋದಾ?" ನನ್ನ ಮಾತು ಅವನನ್ನು ದಿಗಿಲು ಮಾಡಿದ ಹಾಗೆ ಕಂಡಿತು, ಅದನ್ನು ನೋಡಿ ನಾನೇ ಮುಂದುವರಿದೆ " ಸಾಹೇಬ್ರೂ ತುಂಬಾನೇ ಸಿಟ್ಟಲ್ಲಿ ಇದ್ದಾರೆ, ಏನ್ಮಾಡ್ತೀಯಾ  ಈಗ, ನಿಂದೆಲ್ಲಾ ವಿಷ್ಯ ಅವ್ರಿಗೆ ಗೊತ್ತಾಯ್ತು, ರುದ್ರ ಸಾಹೇಬ್ರು ಎಲ್ಲಾ ಅವ್ರಿಗೆ ಹೇಳಿದ್ರು "  ಸುಮ್ಮನೇ ಹೇಳ್ದೆ, ಬಾಣ ನೇರ ಗುರಿಗೇ ತಾಗ್ತು.

 " ನೋಡ್ದ್ರಾ ಸಾರ್ ಆ ರುದ್ರಪ್ಪಾನೇ ಹೇಳ್ದ್ರು, ನಾನ್ ಹೇಳ್ದ್ ಹಾಗೇ ಹೇಳು ನೀರಿಗೆಂತ ದುಡ್ಡ್ ತಗೊಳ್ಳೋದು ಸಾಹೇಬ್ರಿಗೆ ಹೇಳಲ್ಲ ಅಂದ್ರೂ ಸಾರ್, ರಾತ್ರೆ ನೀನು ಇಲ್ಲಿರಬೇಕು ಅಂತಾನೂ ಇಲ್ಲ, ಬೇಕಾದರೆ ಮನೇಗ್ ಹೋಗೂ ಬೆಳಿಗ್ಗೆ ಬಂದರೆ ಸಾಕೂ ಅಂದ್ರು, ಅದಕ್ಕೇ ಅವ್ರ ಹೇಳ್ದ ಹಾಗೇ ಮಾಡ್ದೆ,  ನಂಗೇ ನೂ ಗೊತ್ತಿಲ್ಲ  ಸಾರ್, ನಾನು ಸಂಸಾರಸ್ಥ" .
ಅಂದ.  ಇದರರ್ಥ ಈ ಎರಡು ದಿನಗಳಿಂದ ರಾತ್ರೆ ಈತ ಡ್ಯೂಟಿಯಲ್ಲಿರಲೇ ಇಲ್ಲ, ಹಾಗಾದರೆ ನೀರು ಖಾಲಿಯಾದ್ರಲ್ಲಿ ರುದ್ರನ ಕೈವಾಡವೇ ಇದೆ ಅನ್ನುವುದರಲ್ಲಿ ನನಗೆ ಸಂಶಯ ಉಳಿಯಲಿಲ್ಲ. ಇವ್ನಿಗೂ ಕುಡಿಯೋ ಅಭ್ಯಾಸ ಇರೋದ್ರಿಂದ, ಹ್ಯಾಗ್ ಹ್ಯಾಗೋ ಪುಡಿಕಾಸು ಮಾಡ್ಕೋತಾ  ಇರ್ತಾನೆ
." ಸರಿ,  ಇನ್ಮೇಲೆ ಹಾಗೆಲ್ಲಾ ಮಾಡ್ಬೇಡ ಆಯ್ತಾ, ಈಗ ನೀನು ಒಂದ್ ಕೆಲ್ಸ ಮಾಡು, ನಾನು ಸಾಹೇಬ್ರನ್ನ ಕರ್ಕೊಂಡು ಬರ್ತೀನಿ, ನೀನು ನಂಗೇನೂ ಗೊತ್ತಿರಲಿಲ್ಲ, ನಾನು ರಜೆಲಿದ್ದೆ, ಈ ಊರವ್ರು ಯಾರೋ ಬಂದು ಜೋರು ಮಾಡ್ದ್ರು, ನೀರ್ ಬಿಟ್ಟಿಲ್ಲಾ ಯಾಕೇ ಅಂತ, ಅದ್ನೇ ನಿಮ್ಗೆ ಹೇಳ್ದೆ, ನಂಗೊತ್ತಿರಲಿಲ್ಲ, ತಪ್ಪಾಯ್ತು ಅಂತ ಹೇಳು, ಮುಂದೆ ಹೀಗೆಲ್ಲಾ ತರ್ಲೆ ಮಾಡ್ಬೇಡ ಆಯ್ತಾ"  ಎಂದೆ. 
"ಸರಿ ಸಾರ್, ನೀವ್ ಹೇಳ್ದ ಹಾಗೇ ಕೇಳ್ತೀನಿ, ಇನ್ನು ಆ ರುದ್ರಪ್ಪಾ ಹೇಳ್ದ ಹಾಗೆ ನಮ್ಮಪ್ಪನಾಣೇ ಕೇಳೋಲ್ಲ,......  ಸರ್..... ಅದೇ ನೀರಿನ್ ವಿಷ್ಯ...!!!!"     ನಂಗೆ ಬೇಕಾದದ್ದೂ ಅದೇ
" ಸರಿ ಬಿಡು ಅದೆಲ್ಲಾ ನಾನು ನೋಡ್ಕೋತೇನೆ."

ಪಂಪ್ ಹೌಸಿನಿಂದ ಹೊರ ಬಿದ್ದೆ. ದೊಡ್  ಸಾಹೇಬ್ರನ್ನ ಕರೆತರುವ ಅವಶ್ಯಕಥೆ ಬೀಳಲೇ ಇಲ್ಲ.

ಮನೆಗೆ ಬಂದಾಗ ನನ್ನ ಗೃಹ ಮಂತ್ರಿ ಭಾರೀ ಖುಷಿಯಲ್ಲಿದ್ದ ಹಾಗಿತ್ತು. " ರೀ ನೀವು ನಿನ್ನೆ ತಂದ ಸೀರೆ ನನ್ನಕ್ಕ ನೋಡಿ ತುಂಬಾ ಸಂಭ್ರಮ ಪಟ್ಟಳು, ಅವಳಿಗೆ ಆ ಬಣ್ಣವೆಂದರೆ ತುಂಬಾನೇ ಇಷ್ಟ, ಅವಳಿಗೇ ಕೊಟ್ಬಿಡೋಣವಾ?" "ಆಯ್ತಪ್ಪ, ನಿಂಗೆ ಬೇಡವಾದರೆ ಕೊಡು "  ನಾನೆಂದೆ.
 "ಅದ್ಯಾಕ್ರೀ ಹಾಗೆ ಹೇಳ್ತೀರಾ?, ನನ್ನ ಪತಿದೇವರು ಪ್ರೀತಿಯಿಂದ ನನಗೆಂತ ತಂದದ್ದು ನಾನು ಯಾರಿಗೂ ಕೊಡಲ್ಲ,"
ಓ ಇದಪ್ಪಾ ವರಸೆ!!!    "ಸರಿ ಸರಿ ಅಂತಹದ್ದೇ ಮತ್ತೊಂದು ತಂದು ಅವರಿಗೆ ಕೊಟ್ತರಾಯ್ತು"  ಸ್ವರ ತಗ್ಗಿಸಿದೆ
  ಆದರೂ ಕೇಳಿ  ಇವರ ಮುಖ ಊರಗಲವಾಯ್ತು.
"ಅಂದ ಹಾಗೇ ಕನ್ಯಾಲ್ನ  ಹೆಂಡತಿ ಪುನಹ ಮನೆಗೆ ಹೊರಟಳಂತೆ"  ನಾನು
"ಅವರ ಹೆಂದತಿಗೆ  ಕಪ್ಪುಸೀರೆ, ಮುತ್ತಿನ ಹಾರ ಕೊಡಿಸಲು ಹೇಳಿ ಎಲ್ಲ ಸರಿಯಾಗುತ್ತೆ"  ಎಂದಳು ಸಾಮ್ರಾಜ್ಞಿ.
"ನಿನಗೆ ಹೇಗೇ ಗೊತ್ತು?" ಕೇಳಿದೆ ಅಚ್ಚರಿಯಿಂದ.
" ಕೆಲವು ರಹಸ್ಯಗಳನ್ನು ಗಂಡಂದಿರಿಗೆ ಹೇಳ ಕೂಡದಪ್ಪಾ" ಕುಟುಕಿದಳು ಸಿ ಐ ಡಿ.
ಸಿಕ್ಕಿತಲ್ಲಾ ಸ್ನೇಹಿತನ ಖುಷಿಯ ಬೀಗದ  ಕೈ!!!!

ಅಷ್ಟರಲ್ಲಿ ಬಾಗಿಲ ಸದ್ದಾಯ್ತು.
"ಏನೂ ಗೌಡರೆ ಇಷ್ಟು ದೂರ?"
"ಮನೆಯವ್ರು ಇನ್ನೊಂದ್ ಮಹಡಿ ಕಟ್ಕೋಬೇಕೂ ಅಂತ ಇದ್ದಾರೆ, ಅದೇ ಅಡಿಪಾಯ ಭದ್ರ ಇದೆಯೋ ಇಲ್ಲವೋ ಗೊತ್ತಿಲ್ಲ, ಏನ್ಮಾಡೋದೂ ಅಂತ ನಿಮ್ಮನ್ನ  ಕೇಳೋಕೆ ಬಂದಿದ್ದೇನೆ" ಅಂದ ಗೌಡ.
    "ಗೌಡರೇ ಹಣ  ಇದ್ದರೆ ಈಗ ಏನು ಬೇಕಾದರೂ ಮಾಡಬಹುದು, ಇತ್ತೀಚೆಗೆ ಹಾರೋ ಬೂದಿ(Fly ash  ) ಯಿಂದ ಮಾಡಿದ ಇಟ್ಟಿಗೆಗಳು ಸಿಗುತ್ತವೆ ಅವುಗಳು ತುಂಬಾನೇ ಹಗುರ , ಕಟ್ಟಲೂ ಸುಲಭ, ಸಿಮೆಂಟಿನ ಖರ್ಚೂ ಉಳಿಯುತ್ತೆ, ಮಾರ್ಕೇಟಿನಲ್ಲಿ ಬೇಕಾದಷ್ಟು ಬ್ರಾಂಡ ಸಿಗುತ್ತೆ ಬಿಡಿ" ಎಂದೆ.  ಅಷ್ಟರಲ್ಲಿ ಕಾಫಿ ಬಂತು.
"ಮತ್ತೆ ನಮ್ಮ ಕುರಿಗಳಿಗೆ ಕಡಿಮೆ ಖರ್ಚಿನಲ್ಲಿ ದೊಡ್ಡಿ ಮಾಡ್ಸ್ಕೋಬೇಕಲ್ಲಾ, "  ಕಾಫಿ  ಕುಡಿಯುತ್ತಾ ಕೇಳಿದ ಗೌಡ.
"ಇದಕ್ಕೂ ಒಂದು ಸುಲಭ  ಉಪಾಯ ಹೇಳಿಕೊಡ್ತೇನೆ, ಮುಂದಿನ ರವಿವಾರ ಮನೆಗೆ ಬನ್ನಿ ವಿವರವಾಗಿ ಹೇಳ್ಕೊಡ್ತೇನೆ. ನೀವೇ ಮನೆಯಲ್ಲೇ ಜಾಸ್ತಿ ಖರ್ಚಿಲ್ಲದೇ ಕಾಂಕ್ರೀಟಿನ ಚಾವಣಿ ಮಾಡ್ಕೋಬಹುದು. ಖಾಂಡಿತಾ ಬನ್ನಿ "

************        *********************                                      **********************************

" ಸಾರ್ ಸಾಹೆಬ್ರ ಯಾವುದೋ ಕಾರ್ಡ ಕಳೆದು ಹೋಗಿದೆಯಂತೆ ನೋಡಿದ್ರಾ ನೀವು? ನೋಡಿ  ಕರೀತಾ ಇದ್ದಾರೆ"
ಶೇಟಿ ಮಾರನೆಯ ದಿನ ಬೆಳಿಗ್ಗೆ ಆಫೀಸಿಗೆ ಬಂದ ಕೂಡಲೇ ಕರೆದು ಹೇಳಿದ. ನಾನು ಒಳ ಹೋದೆ. ರುದ್ರ ಮತ್ತು ಸಾಹೆಬ್ರು ರೂಮೆಲ್ಲಾ ತಾಕಲಾಡುತ್ತಿದ್ದರು.
 " ಏನಾಯ್ತು ಸಾರ್, ಸಾರ್ ಏನು ಕಳೆದುಕೊಂಡಿರಿ?"   ಕೇಳಿದೆ ನಾನು.
                                                
"ಸಾಹೆಬ್ರ ಕ್ರೆಡಿಟ್ ಕಾರ್ಡ ಕಳೆದು ಹೋಗಿದೆಯಂತೆ , ನೀವೆಲ್ಲಾದರೂ ನೋಡಿದ್ರಾ?"  ರುದ್ರ ಕೇಳಿದ. ನಿನ್ನೆಯ  ಬೆಳಗಿನ ಘಟನೆಯ  ಬಳಿಕ ಆತ  ಸಾಹೇಬರ ಪಾರುಪತ್ಯ ವಹಿಸಿಕೊಂಡಿದ್ದ. ನಾನೆಂದೆ  " ಇಲ್ಲಪ್ಪ..".
"ನಿನ್ನೆ ಮಾರ್ಕೇಟಿಗೆ ಹೋಗಬೇಕು ಅಂದಿದ್ದರಲ್ಲಾ ಸಾರ್ ಅಲ್ಲೆಲ್ಲಾದರೂ ಮಿಸ್ ಆಯ್ತಾ ಹೇಗೆ?"  ಕೇಳಿದ್ದು ಸಾಹೇಬರನ್ನಾದರೆ ಉತ್ತರ  ನಿರೀಕ್ಷಿಸಿದಂತೆಯೇ ರುದ್ರನಿಂದ  ಬಂತು.  " ನಿನ್ನೆ ಎಲ್ಲಿಗೂ ಹೋಗಲಿಲ್ಲ ಅಲ್ಲ ಸಾರ್ ನೀವೂ?  ನಾನ್ ಹೇಳಿದ  ಹಾಗೇ ನಿಮ್ಮ  ಕಾರ್ಡ್ ಬ್ಲಾಕ್ ಮಾಡಿಸಾರ್" 
ಯಾರ ಉತ್ತರಕ್ಕೂ ಕಾಯದೇ ಡಯಲ್ ಮಾಡಿ ರಿಸೀವರ್ ಸಾಹೇಬರ ಕಡೆ ನೀಡಿ, ಅವರು ತೆಗೆದುಕೊಳ್ಳುವುದಲ್ಲಿದ್ದಾಗ , ತಾನೇ ಅವರ ಡೈರಿಯಿಂದ ವಿವರ ಹೇಳಿ ಕಾರ್ಡ ಕ್ಯಾನ್ಸಲ್ ಮಾಡಿಸಿಯೇ ಬಿಟ್ಟ.
ಈ ಮಧ್ಯೆ ನಾನು "ಸ್ವಲ್ಪ ಯೋಚನೆ ಮಾಡಿ ಸಾರ್, ಎಲ್ಲೆಲ್ಲಿ ಇಟ್ಟಿರಬಹುದು ಅಂತ ಯೋಚನೆ ಮಾಡಿ"  ಅಂತ ಹೇಳಿದ್ದೂ ಅವರು ಗಣನೆಗೆ ತೆಗೆದುಕೊಂಡ  ಹಾಗೇ ಕಾಣಲಿಲ್ಲ.
ಅಲ್ಲದೇ ತಾನೇಎಲ್ಲಾ ಗೊತ್ತಿದ್ದವನ  ಹಾಗೇ ರುದ್ರ  " ನಿಮ್ಗೆ ಇದೆಲ್ಲಾ  ಗೊತ್ತಾಗೋಲ್ಲ ರಾವ್ ಅವರೇ , ನನ್ನ ಭಾವ ಹೀಗಾಗಿ ಕಾರ್ಡ ಕ್ಯಾನ್ಸಲ್ ಮಾಡದೇ ತಮ್ಮ  ೭೫ ಸಾವಿರ ರೂಪಾಯಿ ಕಳಕೊಂಡರು ಗೊತ್ತಾ..? ನಿಮ್ಮ ಹತ್ತಿರ ಕಾರ್ಡ್ ಇದ್ದರಲ್ವಾ ಗೊತ್ತಾಗೋದು" ಎಂದಿದ್ದ.

"ಅದೆಲ್ಲಾ ಇರಲಿ, ಸಾರ್ ನೀವು ಈಗಲೇ ಪೋಲೀಸ್ ಕಂಪ್ಲೇಂಟ್ ಕೊಡಿ,  ಸಾರ್ ಕಳ್ಳ  ಮಾಲು ಸಮೇತ ಸಿಕ್ಕಿ ಬಿಡ್ತಾನೆ, ನೀವು ಮಾಡ್ತೀರಾ ನಾನೇ ಮಾಡಲಾ? ನನ್ನ ಸ್ನೇಹಿತನೊಬ್ಬ ಒಳ್ಳೆ ಪೋಲೀಸ್ ಇದ್ದಾನೆ" ರುದ್ರ ಕೇಳಿದಾಗ   ಸಾಹೇಬರು ಯಾಕೋ ಯೋಚಿಸುತ್ತಿದ್ದ ಹಾಗೇ ಕಂಡಿತು.
ನಾನು ಈಗ ಬಾಯ್ಬಿಟ್ಟೆ   " ಕಾರ್ಡ್ ಕ್ಯಾನ್ಸಲ್ ಮಾಡಿ ಆಯ್ತಲ್ಲ , ಇನ್ನೇನು ಬಿಡಿ ಸಾರ್"
" ಒಳ್ಳೆ ಕಥೆ ಆಯ್ತಲ್ಲ, ನಿಮ್ದು ರಾವ್ ಅವರೇ, ಯಾಕೆ ದುಡ್ಡು ಹೋದರೆ ಸಾಹೇಬ್ರದ್ದಲ್ವಾ ನಿಮ್ಗೇನು ಅಂತಾನಾ?"
ರುದ್ರ ನನ್ನ ಕೀಳು ಮಾಡಲೆಂದೇ ಹೇಳಿದ ಹಾಗಿತ್ತು .
ನನಗೆ ತುಂಬಾ ಬೇಸರ ವಾಯ್ತು. ಮತ್ತೆ ಅಲ್ಲಿ ನಿಲ್ಲ ಲಾಗಲಿಲ್ಲ ,
ಹೊರ ಹೊರಟೆ.


ನಾನೂ ನನ್ನ ಬಾಸೂ   ೭          

ಸಿಕ್ಕಿ ಬಿದ್ದ ಕಳ್ಳ

ಪಾಪ ಇವತ್ತಂತೂ ಯಾವನೋ ಕಳ್ಳನ ಗ್ರಹಚಾರ ಅಂತ ಕಾಣ್ಸತ್ತೆ.
ಈ ರುದ್ರನ ಗೆಳೆಯ ಪೋಲೀಸನನ್ನು ನಾನೂ ಬಲ್ಲೆ. ಹೊರಗಡೆ ಜೋಗ ನಿಂತಿದ್ದ.
 ಅವನು ನನ್ನನ್ನು ನೋಡಿ ಮುಖ ಕೆಳಗೆ ಹಾಕಿದ, ಅಂದರೆ ರುದ್ರನಿಗೆ ನಿನ್ನೆಯ ವಿಷಯ ಗೊತ್ತಾಯ್ತು ಅಂತ ಕಾಣ್ಸತ್ತೆ.
ಇದರ ಅರ್ಥ ನಿನ್ನೆಯ ಘಟನೆಯಲ್ಲಿ ತನ್ನ ಆಟ  ನಡೆಯಲಿಲ್ಲ ಅಂತ ತಿಳಿದು ಹ್ಯಾಗಾದರೂ ಬಾಸನ್ನು ತನ್ನ ಕಡೆಗೆ ನಡೆಸಲು ಪಿತೂರಿ ನಡೆಸಿದ್ದಾನೆ.
ಇದೆಲ್ಲಾ ಖುರ್ಚಿಗಾಗಿ ರಾಜಕೀಯದವರು ನಡೆಸಿದ ಪಿತೂರಿ ತರವೇ  ನಡೀತಾ ಇದೆ. ಹೋಗಲಿ ಇದು ಇದ್ದದ್ದೇ, ಅದೃಷ್ಟ ಯಾರ ಕಡೆಗಿದೆಯೋ?.

ಸಂಜೆಯ ವರೆಗೆ ನನಗೆ ಫುರ್ಸೊತ್ತೇ ಇರಲಿಲ್ಲ. ನೀರಿನ ಸಮಸ್ಯೆ ಬಗೆ ಹರಿಸಲಿತ್ತಲ್ಲ!! ನಾನು ಆ ತಲೆ ಬಿಸಿಯಲ್ಲೇ ಇದ್ದೆ. ನನಗೆ ಆಫೀಸಿಗೆ ಹೋಗಲಾಗಲೇ ಇಲ್ಲ. ಪಂಪ್ ಹೌಸ್ ನಿಂದಲೇ ಎಲ್ಲಾ ಕೆಲಸ ಮುಗಿಸಿಯೇ  ರಾತ್ರೆ ಪಾಳಿಯ ಚೌಕಿದಾರ್ ಸಂಜೆ ಕೆಲಸಕ್ಕೆ ಬಂದ ಮೇಲೇ ನಾನು ಮನೆಗೆ ನಡೆದೆ. ಪೇಟೆಯ ಹತ್ತಿರ ಬಂದಾಗ ಗ್ರಹ ಮಂತ್ರಿ ಮನೆಗೆ ಬೇಕಾದ ವಸ್ತುಗಳ ಪಟ್ಟಿಯ ನೆನಪು ಅಕಾಸ್ಮಾತ್, ಅದೃಷ್ಟವಶಾತ್ ನೆನಪಿಗೆ ಬಂತು.( ಇಲ್ಲದಿದ್ದರೆ ಕಳೆದ ನಾಲ್ಕು ದಿನಗಳಿಂದ ಏನೇನೋ ಸಬೂಬು ಹೇಳುತ್ತಾ ತಪ್ಪಿಸಿಕೊಂಡಿದ್ದೆನಾದರೂ, ಇವತ್ತಿನ ಗೃಹ ಯುದ್ಧ ತಪ್ಪಿಸಲಸಾದ್ಧ್ಯವಿತ್ತು).
ನೀಲಿಯನ್ನು ಪೇಟೆಯ ಕಡೆ ತಿರುಗಿಸಿದೆ.

*************************                                                                ******************************

 ನಾನು ಬೆಳಿಗ್ಗೆ ಆಫೀಸು ತಲುಪುವಾಗ ಎಂದಿನಂತೆ ಸ್ವಲ್ಪತಡವಾಯ್ತು.
ದೂರದಿಂದಲೇ ಬಾಸ್ ನ ಗಲಾಟೆ ಕೇಳಿ ಬರುತ್ತಲಿತ್ತು.
 "ಏನ್ರೀ ನಿಮಗೆ ತಲೆ ಸರಿ ಇದೆಯೇನ್ರೀ? ನಿಮ್ಮನ್ನ  ಯಾರ್ರೀ ಕೆಲಸಕ್ಕೆ ತಗೊಂಡಿದ್ದೂ? ನಿಮಗೆ ಚಾರ್ಜ್ ಶೀಟ್ ಕೊಡ್ತೇನೆ"...  ನಿಮ್ಮ.....!!?? "      ಶೇಟೀ , ರಾವ್ ಅವರು ಬಂದ್ರಾ ನೋಡೂ..."  

ಶೇಟಿ ನಗಾಡ್ತಾ  ನನ್ನ ನೋಡಿ " ಸಾರ್ ಆಗಲೇ ಮೂರ್ನಾಲ್ಕು ಬಾರಿ ನಿಮ್ಮನ್ನು ಕರೆದ್ರು , ಬೇಗ ಹೋಗಿ ಸಾರ್" ಎಂದ.
" ನಾನು ಒಳ ನುಗ್ಗಿ ಏನ್ಸಾರ್ ಕರೆದ್ರಾ" ಅಂದೆ.
ನನ್ನ ನೋಡಿ ಬಾಸ್ ನಕ್ಕು "ಬನ್ರೀ ರಾವ್ ಕುಳಿತುಕೊಳ್ಳಿ "

ಖುರ್ಚಿನೂ ತೋರಿಸಿದರು.
ನಾನು ಪಕ್ಕದಲ್ಲಿ ನಿಂತೇ ಇದ್ದ ರುದ್ರನ ಕಡೆಗೊಮ್ಮೆ ದೃಷ್ಟಿ ಹಾಯಿಸಿದೆ. ಅಲ್ಲಿ ಅಸಹಾಯಕತೆಯಿತ್ತು.
ಬಾಸ್ ರುದ್ರನ ಕಡೆ ನೋಡುತ್ತಾ " ನಿನ್ನೆಯೇ ನಿನ್ನ ನಾಟಕವೆಲ್ಲಾ ಗೊತಾಗಿತ್ತು, ಜೋಗನಿಂದ, ಈ ರಾವ್ ಅವರ ಸಹಾಯವಿಲ್ಲದೇ ಹೋಗಿದ್ದರೆ " ನನ್ನ ಕಡೆ ತಿರುಗಿ" ನಿಮಗೆ ಎಷ್ಟು ಧನ್ಯವಾದ ಅರ್ಪಿಸಿದರೂ ಕಡಿಮೆಯೇ "
ರುದ್ರನ ಕಡೆ  ನೋಡುತ್ತಾ " ನಿನ್ನ ಪೋಲೀಸಪ್ಪ ನಿನ್ನೆ ನನ್ನ  ಶ್ರೀಮತಿಯನ್ನ ನನ್ನದೇ ಕ್ರೆಡಿಟ್ ಕಾರ್ಡ್ ಕದ್ದ ಮತ್ತು ಉಪಯೋಗಿಸಿದ ತಪ್ಪಿಗೆ ಜೈಲಿಗೆ ಹಾಕ್ತಾ ಇದ್ದ! ರಾವ್  ಅವರು ಸರಿಯಾದ ಸಮಯಕ್ಕೆ ಆ ಮಾಲ್ ಗೆ ಬಾರದೇ ಹೋಗಿದ್ದರೆ!!."
ನಾನು  ಸಮಾಧಾನ ಮಾಡಲೆತ್ನಿಸಿದೆ " ಸರಿ ಹೋಗಲಿ ಬಿಡಿ ಸಾರ್ ಆದದ್ದಾಯಿತು, ಅಂದ ಹಾಗೆ ನಿಮ್ಮ ಕಾರ್ಡ್ ನಿಮ್ಮ ಶ್ರೀಮತಿಯವರ ಕೈಗೆ ಹೇಗೆ..? ಓಹ್ : ಅರ್ಥವಾಯ್ತು , ಅಂದರೆ ನಿಮ್ಮ ಕಾರ್ಡ್ ಅವರ ಕೈಯ್ಯಲ್ಲಿತ್ತು!!"
ಅವರೆಂದರು " ಹೌದು, ಅವರೊಂದಿಗೆ ನಾನೂ ಹೋಗಲಿದ್ದೆ, ಆದರೆ ನಾನು ಅದನ್ನು ಮರೆತು ಪಂಪ್ ಹೌಸಿಗೆ ಹೋದಾಗ, ಈ  ರುದ್ರನ ನಾಟಕವೆಲ್ಲಾ ತಿಳಿಯಿತು. ಆತ ತನ್ನ ಜನರಿಂದಲೇ ರಾತ್ರೋ ರಾತ್ರೆ ನೀರು ಸಾಗಿಸುತ್ತಲಿದ್ದ.
ನಿಮ್ಮ ಹೆಸರು ಕೆಡಿಸಲು. ನೀವು ಹೊಸ ಚೌಕೀದಾರ್ ಇಟ್ಟು ಒಳ್ಳೆಯ ಕೆಲಸ ಮಾಡಿದಿರಿ"
ನಾನೆಂದೆ" ನನಗೂ ಹಿಂದಿನಿಂದಲೇ ಸಂಶಯವಿತ್ತು ಸಾರ್, ಅಂತೂ ತಲೆ ಬಿಸಿ ಹೋಯ್ತಲ್ಲಾ, ಆದದ್ದಾಯಿತು ಬಿಡಿ"
ನಾನೇಳಲು ಹೋದಾಗ ಕಲ್ಲೂರಾಮ್ ತಡೆದು
" ಪ್ರಮೋಶನ್ ಪಾರ್ಟಿ ಯಾವಾಗ?" ಎಂದು ಕೇಳಿ ನಕ್ಕರು.No comments:

Post a Comment