Sunday, April 5, 2015

ಸನ್ನದ್ಧ - ಸಿಪಾಯಿ ಸದಾ ಸಿದ್ಧ

೧. ಅನುಕರಣ

ಸದಾ ಸಿದ್ಧ
ಯುದ್ಧ ಸನ್ನದ್ಧ
ಬಿಸಿಲಲ್ಲಿ, ಮಳೆಯಲ್ಲಿ
ಚುಮುಚುಮು ಬೆಳಕಲ್ಲಿ, ಕಟಗುಡುವಚಳಿಯಲ್ಲಿ,
ಶಿಸ್ತಿನ ನಡಿಗೆ
ಗೈರತ್ತಿನ ದರ್ಪ ಶಿಷ್ಟಾಚಾರ
ನಿಷ್ಟುರ ನಡವಳಿಕೆಯ ಶಿಕ್ಷೆಯ ಚೌಕಟ್ಟು
ಒಗ್ಗಟ್ಟಿನ,ಮುಂದಾಳುತ್ವದ ಸೂತ್ರ ಕಲಿಕೆ
ಕೃಮಬದ್ದ ಅನುಕರಣೆಯ ಸೂತ್ರದ ಬೊಂಬೆ
ಜೀವನುದ್ದಕ್ಕೂ, ಅಣಕು ಯುದ್ಧಕ್ಕೂ
ದೇಶ ಪ್ರೇಮ, ಕರ್ತವ್ಯ ನಿಷ್ಠೆ
ನಿಜಕ್ಕೂ... ಸಿಪಾಯಿ
ಸದಾ ಸಿದ್ಧ
ಯುದ್ಧ ಸನ್ನದ್ಧ


೨. ಅನುಸರಣ

ಮಲಗಿ ಸೂರೆಣಿಸುವಾಗ
ಮೊಂಬತ್ತಿಯ ಬೆಳಕಿಗೂ ಕರಗಿ
ತೊಟ್ಟಿಕ್ಕುವ ಮಂಜುಗಲ್ಲುಗಳು,
ತಿನ್ನಲೂ, ಅರಗಿಸಲೂ ತಿಣುಕಾಡಬೇಕಾದ ಪರಿಸ್ಥಿತಿ
ಮೈಯ್ಯ ಮೂಳೆಮಜ್ಜೆಗಳೂ ಕರಗುವಂತಿಹ ಚಳಿಯ ಪಾಶ
ಕೃಶವಾಗಿ ನಿರ್ವರ್ಣವಾಗುತ್ತಿರುವ ದೇಹ
ಆದರೂ ಸಿಪಾಯಿ ಸದಾ ಸಿದ್ಧ

ಮಳೆಯಲ್ಲೋ ಬಿಸಿಲಲ್ಲೋ
ಬರದಲ್ಲೋ ನೆರೆಯಲ್ಲೋ
ಸಹಾಯ ಹಸ್ತದ ಮಹಾಪೂರ
ಕರ್ತವ್ಯನಿಷ್ಠೆಯ ಸಾಕಾರ
ಸಾವಿಗೂ ಜೀವನಕ್ಕೂ ಇರುವ
ಕ್ಷಣಗಳ ಅಂತರದರಿವು ಅನುದಿನ ಪ್ರತಿಕ್ಷಣ
ತನ್ನವರ ವಿರಹದುರಿಯ
ಕಣ್ಣಾಳದ ನೋವಿನಲ್ಲೂ
ಬಿಡುವಿಲ್ಲದ ಶ್ರಮದಲ್ಲೂ
ಸಿಪಾಯಿ ಸದಾ ಸಿದ್ಧ
ಯುದ್ಧ ಸನ್ನದ್ಧ



೩. ಅನುಭೋಗ (ವಾನಪ್ರಸ್ಥ)

ಸ್ವಾರ್ಥ ಸಾಧಕರ ನಡುವೆ
ಮರೆತ ಬದುಕಿನ ವಿದ್ಯೆ
ಬೊಗಸೆ ತುಂಬದ ಖುಶಿಯ
ಪ್ರೀತಿಯ ಎಲ್ಲೆಯಲ್ಲಿ
ಕಾನೂನಿನ ಚೌಕಟ್ಟು
ಮನದ ನಿರ್ವರ್ಣ ಘಾಯದಲ್ಲಿ
ಸವೆದೀತು ಬದುಕು
ಯುದ್ಧ ವಿರಾಮದಲ್ಲಿ
ವಿಷಣ್ಣ ಬದುಕಿನ
ಚರಮ ಗೀತೆಯಲ್ಲಿ

ಸಿಪಾಯಿ ಸದಾ ಸಿದ್ಧ!!!
ಅದರೆ...... ಇಲ್ಲಿ
(ತನ್ನವರಲ್ಲೇ)

ಯುದ್ಧ ನಿಶಿದ್ಧ!!


1 comment:

  1. ೧. ಅನುಕರಣೆಯ ಮೂಲಕ ಶಕ್ತಿ ಸಂಚಲನ ಉಂಟು ಮಾಡುವನವ ಸಿಪಾಯಿ.

    ೨. ಸರ್ವ ಋತು ಸನ್ನದ್ಧ.

    ೩. ಆನಂತರ ಬದುಕಲಿ ಸಿಪಾಯಿಯನು ಅದರಲ್ಲೂ ತಳ ಮಟ್ಟದವರನು ಸರ್ಕಾರ ನಡೆಸುಕೊಳ್ಳುವ ಪರಿ ಅಕ್ಷಮ್ಯ!

    ReplyDelete